ಆಂಬುಲೆನ್ಸ್ ಚಾಲಕರಿಂದ ಸಂಚಾರ ಸ್ಥಗಿತ

17sirsi4
Published on

ಶಿರಸಿ: ಉತ್ತರ ಕನ್ನಡದಿಂದ ಉಡುಪಿ, ಮಂಗಳೂರಿಗೆ ರೋಗಿಗಳನ್ನು ಕೊಂಡೊಯ್ಯುವ ಆಂಬುಲೆನ್ಸ್​ಗಳನ್ನು ಉಡುಪಿ ಜಿಲ್ಲೆಯ ಶಿರೂರು ಗಡಿಯಲ್ಲಿ ತಡೆದು ವಾಪಸ್ ಕಳುಹಿಸುತ್ತಿರುವುದನ್ನು ಖಂಡಿಸಿ ನಗರದ ಖಾಸಗಿ ಆಂಬುಲೆನ್ಸ್​ಗಳ ಮಾಲೀಕರು ಶುಕ್ರವಾರ ಸಂಚಾರ ಸ್ಥಗಿತಗೊಳಿಸಿ ಉಪವಿಭಾಗಾಧಿಕಾರಿ ಬಳಿ ಸಮಸ್ಯೆ ಹೇಳಿಕೊಂಡರು.

ಉಡುಪಿ ಜಿಲ್ಲೆಯ ಶಿರೂರ ಚೆಕ್​ಪೋಸ್ಟ್​ನಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ರೋಗಿಗಳನ್ನು ಮಣಿಪಾಲ, ಮಂಗಳೂರು, ದೇರಳಕಟ್ಟೆ ಮತ್ತಿತರ ಕಡೆಗೆ ಚಿಕಿತ್ಸೆಗಾಗಿ ಕೊಂಡೊಯ್ಯುವಾಗ ಆಂಬುಲೆನ್ಸ್​ಗಳನ್ನು ತಡೆದು ವಾಪಸ್ ಕಳುಹಿಸುತ್ತಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ಬಿಡದೇ ವಾಪಸ್ ಕಳುಹಿಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸುವವರೆಗೂ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವುದಿಲ್ಲ ಎಂದು ಸ್ಥಳೀಯ ಆಂಬುಲೆನ್ಸ್ ಚಾಲಕರು ತಮ್ಮ ವಾಹನಗಳನ್ನು ಶಿರಸಿಯ ದೇವಿಕೆರೆ ಭೂತೇಶ್ವರ ಸರ್ಕಲ್ ಬಳಿ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ಶಿರಸಿ ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಹಾಗೂ ಸಿಪಿಐ ಪ್ರದೀಪ ಸ್ಥಳಕ್ಕಾಗಮಿಸಿ ಆಂಬುಲೆನ್ಸ್ ಚಾಲಕರ ಮನವೊಲಿಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ಬಳಿಕ ಚಾಲಕರು, ಮಾಲೀಕರು ಆಂಬುಲೆನ್ಸ್​ಗಳನ್ನು ಅಲ್ಲಿಂದ ಖಾಲಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net