ಆ.೨೪ ರಿಂದ ಅಂತರಾಷ್ಟ್ರಿಯ ಮಟ್ಟದ ಪ್ರಥಮ ಸಮ್ಮೇಳನ

bkt-21-1
ಬಾಗಲಕೋಟೆ ನಗರದಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
Published on

ಬಾಗಲಕೋಟೆ: ಔಷಧ ಅನ್ವೇಷಣೆ, ಚಿಕಿತ್ಸಕ ಸವಾಲುಗಳ ಹೊಸ ವಿಧಾನಗಳು ಹಾಗೂ ಜಾಗತಿಕ ಆರೋಗ್ಯ ರಕ್ಷಣೆಗಾಗಿ ಹೊಸ ವಿಧಾನಗಳ ಕುರಿತು ಆ.೨೪ ರಿಂದ ೩ ದಿನಗಳ ಅಂತರಾಷ್ಟ್ರಿಯ ಮಟ್ಟದ ಪ್ರಥಮ ಔಷಧ ವಿಜ್ಞಾನ ಪ್ರಥಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಬಿವಿವಿ ಸಂಘದ ಹಾನಗಲ್‌ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಇಂಡಿಯನ್ ಫಾರ್ಮಾಕಾಲಜಿಕಲ್ ಸೊಸೈಟಿ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಸಮ್ಮೇಳನದಲ್ಲಿ ದೇಶ ವಿದೇಶಗಳಿಂದ ೨೫ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು, ಸಂಶೋಧಕರು, ಅದ್ಯಾಪಕರು ಹಾಗೂ ಅಂದಾಜು ೧೫೦೦ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ೨೬ ವೈಜ್ಞಾನಿಕ ಗೋಷ್ಠಿಗಳು, ೫೦೦ ಸಂಶೋಧನಾ ಲೇಖನಗಳ ಮಂಡನೆ, ಚರ್ಚೆ, ಸಂವಾದ, ವಿಚಾರಗೋಷ್ಠಿಗಳ ಮೂಲಕ ಹೊಸ ವಿಚಾರಗಳ ಅನಾವರಣಗೊಳ್ಳಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆ.೨೫ ರಂದು ಬೆಳಗ್ಗೆ ೯ ಗಂಟೆಗೆ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ದಿ ಭವನದಲ್ಲಿ ಅಂತರಾಷ್ಟ್ರೀಯ ಮಟ್ಟದ ಪ್ರಥಮ ಸಮ್ಮೇಳನ ಇಂಡಿಯನ್ ಫಾರ್ಮಾಕಾಲಜಿಕಲ್ ಸೊಸೈಟಿಯ ಅಧ್ಯಕ್ಷ ಡಾ.ಶಿವಪ್ರಕಾಶ ರತ್ನಮ್ ಉದ್ಘಾಟಿಸಲಿದ್ದಾರೆ. ಭೂಪಾಲ ಮತ್ತು ಜಮ್ಮುವಿನ ಏಮ್ಸನ ಅಧ್ಯಕ್ಷ ಡಾ.ವೈ.ಕೆ.ಗುಪ್ತಾ, ಇಂಡಿಯನ್ ಫಾರ್ಮಾಕಾಲಜಿಕಲ್ ಸೊಸೈಟಿಯ ಕಾರ್ಯದರ್ಶಿ ಡಾ.ಬಿ.ಕಲಾಕುಮಾರ ಇತರರು ಆಗಮಿಸಲಿದ್ದಾರೆ ಎಂದರು.

ಆ.೨೬ ರಂದು ಮಧ್ಯಾನ ೧೨.೩೦ ಗಂಟೆಗೆ ಸಮ್ಮೇಳನದ ಸಮಾರೋಪ ಸಮಾರಂಭ ಜರುಗಲಿದ್ದು, ಅತಿಥಿಗಳಾಗಿ ಡಾ.ಎಸ್.ಈಶ್ವರ ರೆಡ್ಡಿ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೂರು ದಿನಗಳ ಸಮ್ಮೇಳನಕ್ಕೆ ಆಯೋಜನೆಗೆ ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಎಚ್.ಎಸ್.ಕೆ. ಔಷಧ ವಿಜ್ಞಾನ ಮಹಾವಿದ್ಯಾಲಯದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಎಸ್.ಸಾಸನೂರ, ವೈದ್ಯಕೀಯ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವೈ.ಶ್ರೀನಿವಾಸ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪುರ, ಪ್ರಾಧ್ಯಾಪಕ ಡಾ. ವಿ.ಎಂ. ಚಂದ್ರಶೇಖರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net