

ಬಾಗಲಕೋಟೆ: ನಾಗರ ಪಂಚಮಿ ದಿನದಂದು ಮಾನವ ಬಂಧುತ್ವ ವೇದಿಕೆಯಿಂದ ಬಸವ ಪಂಚಮಿ ಆಚರಿಸಿ ಮೌಢ್ಯತೆ ಮುಕ್ತ ಕರ್ನಾಟಕ ನಿರ್ಮಿಸಲು ಜಾಗೃತಿ ಮೂಡಿಸಲಾಗುವುದು. ಹಾವಿಗೆ ಹಾಲೆರೆಯುವ ಬದಲು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು, ವೃದ್ಧರಿಗೆ ಹಾಲು ನೀಡುವ ಮೂಲಕ ಬಸವಪಂಚಮಿ ಪ್ರತಿಯೊಬ್ಬರು ಆಚರಿಸಬೇಕು ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಅಧ್ಯಕ್ಷ ಶ್ರೀಶೈಲ ಅಂಟಿನ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಹಾಗೂ ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ, ವೈಚಾರಿಕ ರಾಜಕಾರಣಿ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮೌಢ್ಯ ಮುಕ್ತ ಕರ್ನಾಟಕ ನಿರ್ಮಾಣ ಹಾಗೂ ಮೂಢನಂಬಿಕೆ ವಿರೋಽ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾನವ ಬಂಧುತ್ವ ವೇದಿಕೆಯಿಂದ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಅಪೌಷ್ಠಿಕತೆಯಿಂದ ೪೦ ಲಕ್ಷ ಜನ ಮಕ್ಕಳು ಬಳಲುತ್ತಿದ್ದಾರೆ. ಅಪಾರ ಪ್ರಮಾಣದ ಹಾಲನ್ನು ಪೋಲು ಮಾಡುತ್ತಾರೆ. ಆ ಮೂಲಕ ಮೌಢ್ಯ ಆಚರಣೆ ಮಾಡುತ್ತಾರೆ. ಆಹಾರದ ನಷ್ಟ ದೇಶದ ನಷ್ಟ ಎಂದು ಮನವರಿಕೆ ಮಾಡಿಕೊಡುವುದರೊಂದಿಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ. ಆ.೨೧ ರಂದು ಜಿಲ್ಲೆಯಾದ್ಯಂತ ಹಾಸ್ಟೆಲ್ ವಿದ್ಯಾರ್ಥಿಗಳು, ಆಸ್ಪತ್ರೆಯಲ್ಲಿನ ರೋಗಿಗಳು, ಅಂಗನವಾಡಿ ಮಕ್ಕಳಿಗೆ ಹಾಲು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಯರಾಜ ಹಾದಿಕಾರ, ಈರಣ್ಣ ಸುತಾರೆ, ಶಿವರಾಜ ಕಲಾದಗಿ, ವೆಂಕಣ್ಣ ಜಗ್ಗಲ, ಹನಮಂತ ಬೆಳಗಲಿ ಉಪಸ್ಥಿತರಿದ್ದರು.