

ಬಾಗಲಕೋಟೆ: ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲದ ಮನೋರೋಗ ಚಿಕಿತ್ಸಾ ವಿಭಾಗ, ಭಾರತೀಯ ಮನೋವೈದ್ಯರ ಸಂಘದ ರಾಜ್ಯ ಶಾಖೆ ಆಶ್ರಯದಲ್ಲಿ ಆ.೧೧ ರಿಂದ ೧೩ ವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ಮಾನಸಿಕ ಆರೋಗ್ಯದ ಸ್ಥಿರತೆಗಾಗಿ ತಜ್ಞರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮಡಿಕಲ್ ಕಾಲೇಜು ಆಡಳಿತ ಮಂಡಳಿ ಕಚೇರಿಯ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಭಾರತೀಯ ಮನೋವೈದ್ಯರ ಸಂಘದ ೩೩ ನೇ ವಾರ್ಷಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ೩೦೦ ಕ್ಕೂ ಹೆಚ್ಚು ವೈದ್ಯರು, ಸಂಶೋಧಕರು, ತಜ್ಞರು ಭಾಗವಹಿಸಲಿದ್ದಾರೆ ಎಂದರು.
ಆ.೧೨ ರಂದು ಬೆಳಗ್ಗೆ ೧೧.೪೫ ಗಂಟೆಗೆ ಶತಾಬ್ಧಿ ಭವನದಲ್ಲಿ ಸಮ್ಮೇಳನವನ್ನು ಬೆಂಗಳೂರಿನ ನಿಮಾನ್ಸ ಸಂಸ್ಥೆಯ ನಿರ್ದೇಶಕಿ ಡಾ.ಪ್ರತಿಮಾಮೂರ್ತಿ ಉದ್ಘಾಟಿಸಲಿದ್ದಾರೆ. ಭಾರತೀಯ ಮನೋವೈದ್ಯರ ಸಂಘದ ದಕ್ಷಿಣ ವಲಯದ ಅಧ್ಯಕ್ಷ ಡಾ.ಉದಯಕುಮಾರ ಕೆ.,, ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಡಾ.ಎನ್.ಎಂ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಮನೋರೋಗ ವಿಭಾಗದ ಮುಖ್ಯಸ್ಥ ಡಾ.ನಾರಾಯಣ ಆರ್.ಮುತಾಲಿಕ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ, ಸಹ ಪ್ರಾಧ್ಯಾಪಕ ಡಾ.ಹರೀಶ ಕುಲಕರ್ಣಿ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದಾರೆ ಎಂದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಬೇವೂರ, ಪ್ರಾಚಾರ್ಯ ಡಾ.ಅಶೋಕ ಮಲ್ಲಾಪುರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮೇಲಿ, ಡಾ.ನಾರಾಯಣ ಮುತಾಲಿಕ, ಡಾ.ಹರೀಶ ಕುಲಕರ್ಣಿ ಇತರರು ಇದ್ದರು.