ಮಾಹಿತಿ ಕೊರತೆ ನೀಗಿಸಲು ಜಾಗೃತಿ : ಲೋಕಾಯುಕ್ತ ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹೇಳಿಕೆ

New Project (25)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಲೋಕಾಯುಕ್ತದ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಕೊರತೆ ನೀಗಿಸುವ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮಸಭೆಗಳಲ್ಲಿ ಮಾಹಿತಿ ನೀಡಲು ಅವಕಾಶ ನೀಡುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಕಾರವಾರದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ತಿಳಿಸಿದರು.

ಲೋಕಾಯುಕ್ತ ಮಂಗಳೂರು ವಿಭಾಗದಿಂದ ಉಳ್ಳಾಲ ನಗರಸಭೆಯಲ್ಲಿ ಮಂಗಳವಾರ ಆಯೋಜಿಸಲಾದ ಸಾರ್ವಜನಿಕ ಅಹವಾಲು, ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.

ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿದ್ದು ಎಲ್ಲ ರೀತಿಯ ದೂರು ನೀಡಬಹುದು. ಬೇರೆ ಯಾವುದೇ ರಾಜ್ಯದಲ್ಲಿಲ್ಲದ ವಿಶೇಷ ಅಧಿಕಾರ ಕರ್ನಾಟಕ ಲೋಕಾಯುಕ್ತಕ್ಕೆ ಇದೆ. ಅಹವಾಲು ಸಭೆಯಲ್ಲಿ ತಾಲೂಕುಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಇರಬೇಕು. ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತಕ್ಕೆ ಸಂಬಂಧಿಸಿ ಮಾಹಿತಿ ಫಲಕ ಹಾಕಬೇಕಿದ್ದರೂ ಕೆಲವು ಕಚೇರಿಗಳಲ್ಲಿ ಇನ್ನೂ ಅಳವಡಿಸಲಾಗಿಲ್ಲ. ಎಲ್ಲ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ, ಹಣಕ್ಕೆ ಸಂಬಂಧಪಟ್ಟ ದಾಖಲೆ ಕಡ್ಡಾಯ ಇರಬೇಕು. ಸಿಬ್ಬಂದಿ ಕಚೇರಿಗೆ ಬಂದಾಗ ಅವರಲ್ಲಿದ್ದ ಹಣ ಹಾಗೂ ಹೋಗುವಾಗ ಇದ್ದ ಹಣದ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಸಹಿ ಪಡೆಯುವುದು ಕಡ್ಡಾಯ. ಆದರೆ ಕೆಲವು ಕಚೇರಿಗಳಲ್ಲಿ ಈ ವ್ಯವಸ್ಥೆ ಇನ್ನೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಲೋಕಾಯುಕ್ತ ಪೊಲೀಸ್ ಉಪಅಧೀಕ್ಷಕಿ ಡಾ.ಗಾನ ಪಿ.ಕುಮಾರ್, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ, ಉಳ್ಳಾಲ ತಾಲೂಕು ತಹಸೀಲ್ದಾರ್ ಪ್ರಶಾಂತ್ ಪಾಟೀಲ್, ಉಳ್ಳಾಲ ನಗರಸಭೆಯ ಪೌರಾಯುಕ್ತ ನವೀನ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

27 ದೂರು ಅರ್ಜಿಗಳು ಸಲ್ಲಿಕೆ

ಒಟ್ಟು 27 ದೂರು ಅರ್ಜಿಗಳು ಸಲ್ಲಿಕೆಯಾದವು. ಈ ಪೈಕಿ 17 ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದು, ನಗರಸಭೆಗೆ ಸಂಬಂಧಿಸಿ 7, ಮೆಸ್ಕಾಂ, ಆರ್‌ಡಿಪಿಆರ್ ಮತ್ತು ಜೆಜೆಎಂಗೆ ಸಂಬಂಧಿಸಿದ ತಲಾ ಒಂದೊಂದು ಅರ್ಜಿ ಸಲ್ಲಿಕೆಯಾದವು. ಉಳ್ಳಾಲ ನಗರಸಭೆಯಲ್ಲಿ ಹೆಲ್ಪ್‌ಡೆಸ್ಕ್ ಇಲ್ಲ ಎನ್ನುವ ದೂರು ಕೂಡಾ ಸಲ್ಲಿಕೆಯಾಗಿದೆ. ದಾಖಲೆಗಳು ಸಮರ್ಪಕ ಇಲ್ಲದಿದ್ದರೆ ಒಂದು ವಾರ ಅವಕಾಶ ನೀಡಲಾಗಿದ್ದು ಭೂಕಬಳಿಕೆ ಸಂಬಂಧ ಸಲ್ಲಿಕೆಯಾದ 11 ದೂರುಗಳ ಪ್ರಕರಣ ದಾಖಲಿಸಲಾಗುತ್ತದೆ. ಉಳ್ಳಾಲ ಡಂಪಿಂಗ್ ಯಾರ್ಡ್ ಮತ್ತು ಮುನ್ನೂರು ಶಾಲೆಗೆ ಸಂಬಂಧಪಟ್ಟ ದೂರಿನ ಬಗ್ಗೆ ಸ್ಥಳ ಪರಿಶೀಲನೆ ನಡೆಸುತ್ತೇವೆ ಎಂದು ಎಸ್ಪಿ ಕುಮಾರಚಂದ್ರ ತಿಳಿಸಿದರು.

ಪಹಣಿ ಪತ್ರಕ್ಕೆ ಮನವಿ

ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿರುವ ಸ.ನಂ.150/1ರಲ್ಲಿರುವ ಆರು ಸೆಂಟ್ಸ್ ಮತ್ತು ಉಳಿಕೆ ಭೂಮಿಯಲ್ಲಿ ಉದ್ಯಾನ ನಿರ್ಮಿಸುವ ನಿಟ್ಟಿನಲ್ಲಿ ಜಮೀನಿಗೆ ಪಹಣಿ ಪತ್ರ ನೀಡುವಂತೆ ನಗರಸಭಾ ಸದಸ್ಯ ಅಬ್ದುಲ್ ಬಶೀರ್ ಕಳೆದೆರಡು ವರ್ಷಗಳಿಂದ ಸಂಬಂಧಪಟ್ಟ ಇಲಾಖಾ ಕಚೇರಿಗಳಿಗೆ ಅಲೆದಾಟ ನಡೆಸಿ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದರು.

ಅನವಶ್ಯಕ ಮಾತನಾಡಬೇಡಿ

ಸಾರ್ವಜನಿಕರು ಅಧಿಕಾರಿಗಳಿಗೆ ದೂರು ನೀಡುತ್ತಿದ್ದ ಸಂದರ್ಭ ನಗರಸಭಾ ಸದಸ್ಯರೊಬ್ಬರು ಸಭೆ ಆರಂಭಿಸಿ ಎಂದು ಜೋರು ಧ್ವನಿಯಲ್ಲಿ ಹೇಳಿದರು. ಇದು ಲೋಕಾಯುಕ್ತ ಸಭೆ, ಸಾರ್ವಜನಿಕರು ದೂರು ಕೊಡುತ್ತಿದ್ದಾರೆ ಎಂದು ಸಿಬ್ಬಂದಿ ತಿಳಿಸಿದಾಗ, ಮೈಕ್ ಕೊಡಿ ಎಂದರು. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಲೋಕಾಯುಕ್ತ ನಿರೀಕ್ಷಕಿ ಭಾರತಿ, ಇದು ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ, ಅನವಶ್ಯಕ ಮಾತನಾಡಬೇಡಿ ಎಂದರು. ಮಾಹಿತಿ ಬೇಕಾದರೆ ಕೇಳಿ ಎಂದು ಎಸ್ಪಿ ತಿಳಿಹೇಳಿದರು.

ವಿಎಗೆ ಏಳು ವರ್ಷ ಶಿಕ್ಷೆ

ಹೆಚ್ಚಾಗಿ 9/11 ಬಾಕಿ ದೂರು, ಮನೆ ಸಂಖ್ಯೆ ಬಾಕಿ, ನೀರು, ವಿದ್ಯುತ್ ದೀಪ, ಅನುದಾನ ದುರುಪಯೋಗ, ಗ್ರಾಮ ಪಂಚಾಯಿತಿ ಕಾಮಗಾರಿಯಲ್ಲಿ ಗುತ್ತಿಗೆ ನೀಡಲು ಪಂಚಾಯಿತಿ ಸದಸ್ಯರಿಗೆ ಪಿಡಿಒ ಒತ್ತಡ ಹೀಗೆ ಸಾಕಷ್ಟು ದೂರುಗಳು ಬರುತ್ತಿವೆ. ಕೃಷಿ ಇಲಾಖೆಯಲ್ಲಿ ಎಷ್ಟೋ ಸವಲತ್ತು ಇದ್ದರೂ ಯಾರದ್ದೋ ಆರ್‌ಟಿಸಿ ನೀಡಿ ದುರುಪಯೋಗಪಡಿಸಲಾಗುತ್ತಿದೆ. ಸವಲತ್ತು ಪಡೆಯುವ ಸಂದರ್ಭ ನೀಡುವ ಆರ್‌ಟಿಸಿಯಲ್ಲಿ ಜಮೀನೇ ಇಲ್ಲದೆ ಮನೆ ಮಾತ್ರ ಇರುತ್ತದೆ. ಕೆಲವು ಕಡೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುರುಪಯೋಗ ಆಗುತ್ತಿದೆ. ಕಾರವಾರದಲ್ಲಿ ಲಂಚ ಪಡೆದ ವಿಎಗೆ ಏಳು ವರ್ಷ ಜೈಲು ಶಿಕ್ಷೆಯಾಗಿದೆ ಎಂದು ಎಸ್ಪಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net