

ಬಂಟ್ವಾಳ: ಇಲ್ಲಿನ ಬಂಟ್ವಾಳ ಪೇಟೆಯಿಂದ ಮೂಡುಬಿದಿರೆ, ವಾಮದಪದವು ಮತ್ತಿತರ ಭಾಗಗಳಿಗೆ ಹೋಗುವ ಖಾಸಗಿ ಬಸ್‌ಗಳು ಕೊಟ್ರಮಣಗಂಡಿ ತರಕಾರಿ ಅಂಗಡಿ ಬಳಿ ರಸ್ತೆಯಲ್ಲಿಯೇ ನಿಲ್ಲುವುದರಿಂದ ಇತರ ವಾಹನಗಳ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತುಂಬಾ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಆ.18ರಿಂದ ಕೊಟ್ರಮಣ ಗಂಡಿಯಲ್ಲಿರುವ ಬಸ್ ನಿಲ್ದಾಣದಲ್ಲಿ ಕಡ್ಡಾಯವಾಗಿ ಬಸ್ ನಿಲುಗಡೆ ಮಾಡಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆ ಹಾಗೂ ಬಂಟ್ವಾಳ ಪುರಸಭೆ ಜಂಟಿ ಪ್ರಕಟಣೆ ಹೊರಡಿಸಿದೆ.
ಬಂಟ್ವಾಳ ಕೊಟ್ರಮಣ ಗಂಡಿಯಲಿ ವಿಶಾಲವಾದ ಬಸ್ ತಂಗುದಾಣ, ಪ್ರಯಾಣಿಕರ ತಂಗುದಾಣ ಸಹಿತ ಸುಸಜ್ಜಿತ ಶೌಚಗೃಹ ವ್ಯವಸ್ಥೆ ಇದ್ದರೂ ಕೂಡ ಹಲವು ವರ್ಷಗಳಿಂದ ಮೂಡುಬಿದಿರೆ, ವಾಮದಪದವು ಮತ್ತಿತರ ಭಾಗಗಳಿಗೆ ಹೋಗುವ ಖಾಸಗಿ ಬಸ್‌ಗಳು ಬಸ್ ನಿಲ್ದಾಣದಲ್ಲಿ ನಿಲುಗಡೆಯಾಗದೆ ಬಂಟ್ವಾಳ ಪೇಟೆಯಿಂದ ಬಂಟ್ವಾಳ ಬೈಪಾಸ್‌ಗೆ ತಿರುವು ಪಡೆಯುವ ರಸ್ತೆಯಲ್ಲಿಯೇ ನಿಲುಗಡೆಯಾಗುತ್ತಿದೆ. ಪ್ರಯಾಣಿಕರನ್ನು ಇಲ್ಲಿಯೇ ಹತ್ತಿಸಿ ತುಂಬಾ ಹೊತ್ತುಗಳ ಕಾಲ ರಸ್ತೆಯಲ್ಲಿಯೇ ನಿಲುಗಡೆಯಾಗುತ್ತಿರುವುದರಿಂದ ಈ ರಸ್ತೆಯ ಮೂಲಕ ಸಂಚರಿಸುವ ಇತರ ಎಲ್ಲಾ ವಾಹನಗಳಿಗೆ ತೊಂದರೆಯಾಗುತ್ತಿದ್ದು, ಟ್ರಾಫಿಕ್ ಜಾಮ್ ಸಮಸ್ಯೆಯೂ ಉಂಟಾಗುತ್ತಿತ್ತು. ಬಸ್ ನಿಲ್ದಾಣ ಇದ್ದರೂ ಕೂಡ ಬಸ್‌ಗಳು ಅಲ್ಲಿ ನಿಲ್ಲದೆ ರಸ್ತೆಯಲ್ಲಿ ನಿಲ್ಲುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದಲೂ ಸಾಕಷ್ಟು ಟೀಕೆಗಳು ಕೇಳಿ ಬಂದಿದೆ. ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಹಲವು ಬಾರಿ ಚರ್ಚೆ ನಡೆದು ನಿರ್ಣಯ ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಬಂಟ್ವಾಳ ಪುರಸಭೆ ಹಾಗೂ ಬಂಟ್ವಾಳ ಸಂಚಾರಿ ಪೊಲೀಸರು ಜಂಟಿಯಾಗಿ ಪ್ರಕಟಣೆ ಹೊರಡಿಸಿದ್ದು, ಮೂಡುಬಿದಿರೆ ಮಾರ್ಗವಾಗಿ ಹೋಗುವ ಎಲ್ಲಾ ಬಸ್‌ಗಳು ಸೋಮವಾರದಿಂದ ಕೊಟ್ರಮಣ ಗಂಡಿ ಬಸ್ ನಿಲ್ದಾಣದಲ್ಲೇ ಬಸ್ ನಿಲುಗಡೆಗೆ ಸೂಚಿಸಿದ್ದಾರೆ.