

ಗ್ರಾಮಾಂತರ: ಮಹಿಳೆ ದುರ್ಬಲಳು ಎನ್ನುತ್ತಿದ್ದ ಕಾಲಘಟ್ಟದಲ್ಲಿ ಮಹಿಳೆ ದುರ್ಬಲಳಲ್ಲ ಪ್ರಬಲಳು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಅಹಲ್ಯಾಬಾಯಿ ಹೋಳ್ಕರ್ ಸ್ತ್ರೀ ಶಕ್ತಿಯ ಧ್ಯೋತಕ ಎಂದು ಅಹಲ್ಯಾಬಾಯಿ ಹೋಳ್ಕರ್ ಸಂಘದ ಅಧ್ಯಕ್ಷೆ ಶಿಲ್ಪಾ ಚಂದ್ರು ಬಾಣಾವರ ಬಣ್ಣಿಸಿದರು.
ಸಹಕಾರ ಸಂಘದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಮಾತೆಯಾಗಿದ್ದ ಅಹಲ್ಯಾಬಾಯಿ ಹೋಳ್ಕರ್, ಮಹಿಳೆಯರ ಸಬಲೀಕರಣಕ್ಕೆ ನೀಡಿದ ಕೊಡುಗೆ ಹಾಗೂ ಹಿಂದುಗಳ ಪವಿತ್ರ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿರುವ ಕಾಶಿ ದೇವಾಲಯದ ಜೀರ್ಣೋದ್ಧಾರ ಮಾಡಿದ ರೀತಿ ಹೀಗೆ ಅವರಲ್ಲಿದ್ದ ಸಾಮಾಜಿಕ ಕಳಕಳಿಯಿಂದಲೇ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದ ಇದ್ದರೂ ಶತಶತಮಾನಗಳಿಂದ ನಮ್ಮೆಲ್ಲರಿಗೂ ಆದರ್ಶರಾಗಿ ಕಾಣುತ್ತಾ ಬಂದಿದ್ದಾರೆ ಎಂದು ನುಡಿ ನಮನ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷೆ ಕಾವ್ಯಾ ಮಾತನಾಡಿ, ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಸಹಕಾರ ಸಂಘವು ಕೇವಲ ಹಣದ ವ್ಯವಹಾರ ಮಾಡುತ್ತಿಲ್ಲ, ಹೋಲ್ಕರ್ ಅವರ ಸಂದೇಶವನ್ನು ಸಹಕಾರ ಸಂಘವು ಪಾಲಿಸುತ್ತಾ ಜತೆಗೆ ಸಮಾಜದ ಮಹಿಳೆಯರನ್ನ ಸಂಘಟಿಸುವ ಕೆಲಸ ಮಾಡುತ್ತಾ ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಗೌರವ ಸಮರ್ಪಿಸುತಿದ್ದೇವೆ ಎಂದರು.
ಸಮಾರಂಭದಲ್ಲಿ ಸಹಕಾರ ಸಂಘದ ಗೌರವ ಅಧ್ಯಕ್ಷೆ ಯಶೋದಮ್ಮ, ನಿರ್ದೇಶಕರಾದ ಯಮುನಾ, ಮೀನಾಕ್ಷಮ್ಮ, ವನಜಾಕ್ಷಿ, ಲಲಿತಮ್ಮ, ನೇತ್ರಾವತಿ, ಚೇತನಾ, ಗೀತಾಮಣಿ, ವಿಶಾಲಾಕ್ಷಿ ಕಾರ್ಯದರ್ಶಿ ಭಾಗ್ಯಲಕ್ಷ್ಮೀ, ಕುರುಬ ಸಮಾಜದ ಮುಖಂಡರಾದ ಚಂದ್ರು ಬಾಣಾವರ, ವಿಜಯ್‌ಕುಮಾರ್, ತಿಮ್ಮೇಗೌಡ ಹಾಗೂ ಹೋಳ್ಕರ್ ಅಭಿಮಾನಿಗಳು ಹಾಜರಿದ್ದರು.