ಮದ್ದೂರು: ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ವಿಷ ಮಿಶ್ರಿತ ಕಲುಷಿತ ನೀರು ಕುಡಿದು ಶನಿವಾರವೂ 20 ಕುರಿಗಳು ಮೃತಪಟ್ಟಿವೆ.
ಶುಕ್ರವಾರ ಸುಮಾರು 13 ಕುರಿಗಳು ಮೃತಪಟ್ಟಿದ್ದವು, ಶನಿವಾರ ಅಸ್ವಸ್ಥಗೊಂಡಿದ್ದ ಹಲವು ಕುರಿಗಳ ಪೈಕಿ 20 ಕುರಿಗಳು ಮೃತಪಟ್ಟಿವೆ.
ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ಚನ್ನಾಪುರ ಗ್ರಾಮದ ರಾಜು ಎಂಬುವರ ಕುರಿಗಳೇ ಮೃತಪಟ್ಟಿದ್ದು, ಅಪಾರ ನಷ್ಟ ಉಂಟಾಗಿದೆ.
ಚನ್ನಾಪುರ ಗ್ರಾಮದಿಂದ ರಾಜು ಅವರು 250ಕ್ಕೂ ಹೆಚ್ಚು ಕುರಿಗಳೊಂದಿಗೆ ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಕಡೆ ಮೇಯಿಸಲು ಬಂದಿದ್ದಾರೆ.
ಶುಕ್ರವಾರ ಮಧ್ಯಾಹ್ನದ ನಂತರ ಮೇವು ತಿಂದ ಬಳಿಕ ಅಲ್ಲಿಯೇ ಇದ್ದ ಚರಂಡಿ ನೀರನ್ನು ಕುಡಿದಿವೆ. ಚರಂಡಿಯಲ್ಲಿ ಮಿಶ್ರಣಗೊಂಡಿದ್ದ ಕಲುಷಿತ ನೀರು ಕುಡಿದು ಕೆಲ ಹೊತ್ತಿನಲ್ಲೇ 50ಕ್ಕೂ ಹೆಚ್ಚು ಕುರಿಗಳು ನರಳತ್ತಿದ್ದವು, ಇದರಲ್ಲಿ 13 ಕುರಿ ಮೃತಪಟ್ಟಿದ್ದವು, ಶನಿವಾರ 20 ಕುರಿಗಳು ಮೃತಪಟ್ಟಿದ್ದು, ಕುರಿಗಳ ಸಾವಿನ ಸಂಖ್ಯೆ 33ಕ್ಕೆ ಏರಿದೆ. ಉಳಿದ ಕುರಿಗಳ ಆರೋಗ್ಯದಲ್ಲೆ ಸುಧಾರಣೆ ಕಂಡಿದೆ.
ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ: ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಿಷ ಮಿಶ್ರಿತ ನೀರನ್ನು ಕುಡಿದು ಹಲವಾರು ಬಾರಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕುರಿಗಳು ಮೃತಪಟ್ಟಿವೆ. ಇದಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಪರಿಸರ ಮಾಲಿನ್ಯ ಇಲಾಖೆಯ ಬೇಜವಾಬ್ದಾರಿಯೂ ಕಾಣುತ್ತಿದೆ. ಮುಂದೆ ಇಂತ ಘಟನೆ ನಡೆಯದಂತೆ ಸಂಬಂಧಿಸಿದ ಕಾರ್ಖಾನೆಗಳ ಮಾಲೀಕರಿಗೆ ನೋಟಿಸ್ ನೀಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಸ್ಥಳೀಯರು ಒತ್ತಾಯಸಿದ್ದಾರೆ.