ಅಸುಂಡಿ ರಸ್ತೆ ತುಂಬ ಗುಂಡಿಯೋ ಗುಂಡಿ…!

24-RNR-01
Published on

ರಾಣೆಬೆನ್ನೂರ: ತಾಲೂಕಿನ ಅಸುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ತುಂಬ ತಗ್ಗು ಗುಂಡಿಗಳು ಬಿದ್ದಿದ್ದು, ನಿತ್ಯ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ.

ನಗರದಿಂದ ಬ್ಯಾಡಗಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಸ್ತೆಯುದ್ದಕ್ಕೂ ಆಳೆತ್ತರದ ಗುಂಡಿಗಳು ಬಿದ್ದಿವೆ. ಇದರಿಂದ ಬೈಕ್, ಕಾರು ಹಾಗೂ ಲಾರಿಗಳು ಗುಂಡಿಗಳಲ್ಲಿ ಸಿಲುಕಿ ಪರದಾಡುವಂತಾಗಿದೆ. ಆಗಾಗ ಮಳೆ ಬೀಳುತ್ತಿರುವುದರಿಂದ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಾಗುವಂತಾಗಿದೆ.

ರಸ್ತೆಯ ಪಕ್ಕದಲ್ಲಿ ಯಾವುದೇ ಚರಂಡಿ ನಿರ್ವಿುಸಿಲ್ಲ. ಹೀಗಾಗಿ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಹಾಳಾಗಿರುವ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಅಸುಂಡಿ ಹಾಗೂ ಹೂಲಿಹಳ್ಳಿ ಸೇರಿ ಸುತ್ತಲಿನ ಗ್ರಾಮಸ್ಥರು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಕ್ರಮ ಕೈಗೊಂಡಿಲ್ಲ. ಇದೇ ರೀತಿ ಮುಂದುವರಿದರೆ, ಮುಂದಿನ ದಿನದಲ್ಲಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ನಿರಂತರ ಧರಣಿ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಈ ರಸ್ತೆ ಮಾರ್ಗವಾಗಿ ಕದರಮಂಡಲಗಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳುತ್ತೇವೆ. ಕಳೆದ ಕೆಲ ತಿಂಗಳಿಂದ ರಸ್ತೆ ತುಂಬಾ ಹದಗೆಟ್ಟು ಹೋಗಿದ್ದು, ಈ ಮಾರ್ಗವಾಗಿ ಓಡಾಡುವುದೇ ಕಷ್ಟಕರವಾಗುತ್ತಿದೆ. ಗುಂಡಿಗಳು ಇರುವುದರಿಂದ ಅಪಘಾತ ಸಂಭವ ಹೆಚ್ಚಿದೆ. ಆದ್ದರಿಂದ ಕೂಡಲೆ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಪಡಿಸಬೇಕು. | ಪ್ರಶಾಂತ ದಾಸರ, ಸ್ಥಳೀಯ ನಿವಾಸಿ ಅಸುಂಡಿ ರಸ್ತೆಯಲ್ಲಿ ಸಮಸ್ಯೆಯಾಗಿರುವುದನ್ನು ಅರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ತಾತ್ಕಾಲಿಕವಾಗಿ ಖಡಿ ಹಾಕುವ ಮೂಲಕ ಸಮಸ್ಯೆ ಬಗೆಹರಿಸಲಾಗುವುದು. ಮಳೆಗಾಲ ಮುಗಿದ ನಂತರದಲ್ಲಿ ರಸ್ತೆಯನ್ನು ದುರಸ್ತಿಗೊಳಿಸಿ ಡಾಂಬರೀಕರಣ ಮಾಡಲಾಗುವುದು. | ಸುರೇಂದ್ರ ದೊಡ್ಡಮನಿ, ಎಇಇ ಲೊಕೋಪಯೋಗಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net