

ಗುಂಡ್ಲುಪೇಟೆ: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಯಲ್ಲಿ ಗೃಹ ಆರೋಗ್ಯ ಯೋಜನೆ ದೂರದೃಷ್ಟಿಯುಳ್ಳದಾಗಿದ್ದು ಮುಂಬರುವ ವರ್ಷಗಳಲ್ಲಿ ಹಲವರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಆರೋಗ್ಯ ಇಲಾಖೆಯಿಂದ ಪಟ್ಟಣದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಗೃಹ ಆರೋಗ್ಯ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾಯೋಗಿಕವಾಗಿ ಆರಂಭಿಸಿದ ಯೋಜನೆ ರಾಜ್ಯದ ಕೋಲಾರ ಜಿಲ್ಲೆಯಲ್ಲಿ ಯಶಸ್ವಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಇದನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಜಾರಿಗೊಳಿಸುತ್ತಿದೆ. ಇಂದು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರ ಮೂಲಕ ತಾಲೂಕಿನಲ್ಲಿ ಯೋಜನೆಗೆ ಚಾಲನೆ ನೀಡಲಾಗಿದೆ. ಇಂದಿನಿಂದ ಗುಂಡ್ಲುಪೇಟೆ ತಾಲೂಕಿನಾದ್ಯಂತ ತಪಾಸಣಾ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರು ಮನೆಗಳಿಗೆ ತೆರಳಿ ಅಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ 30 ವರ್ಷ ಮೇಲ್ಪಟ್ಟವರು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ತಪಾಸಣೆಗೆ ಒಳಪಡಲು ನೆರವಾಗಲಿದ್ದಾರೆ. ರಕ್ತದೊತ್ತಡ, ಡಯಾಬಿಟಿಸ್, ಕ್ಯಾನ್ಸರ್ ಸೇರಿದಂತೆ 14 ಅಸಾಂಕ್ರಾಮಿಕ ರೋಗಗಳ ತಪಾಸಣೆಯನ್ನು ಸಮುದಾಯ ಆರೋಗ್ಯ ಅಧಿಕಾರಿಗಳು ನಡೆಸಲಿದ್ದಾರೆ. ರೋಗಗಳಿಗೆ ತುತ್ತಾದವರಿಗೆ, ಅವರ ಬಳಿಗೆ ಉಚಿತವಾಗಿ ಔಷಧಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಔಷಧ, ಉಪಕರಣಗಳಿಗಾಗಿ 185 ಕೋಟಿ ರೂ. ಅನುದಾನ ಬಳಕೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂಪಾಷಾ, ಸಿಬ್ಬಂದಿ ಪುಟ್ಟಸ್ವಾಮಿ, ಪುರಸಭೆ ಅಧ್ಯಕ್ಷ ಮಧುಸೂದನ್, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು ಇದ್ದರು.