ಅಶಕ್ತರಿಗೆ ಉಚಿತ ಆಟೋ ಸೇವೆ

9sirsi6a
Published on

ಶಿರಸಿ: ಲಕ್ಷಾಂತರ ಭಕ್ತರು ಸೇರುವ ಮಾರಿಕಾಂಬಾ ಜಾತ್ರೆಯಲ್ಲಿ ಅಂಗವಿಕಲರು, ವೃದ್ಧರು, ಗರ್ಭಿಣಿಯರು, ಬಾಣಂತಿಯರು, ಅಶಕ್ತರಿಗೆ ದೇವಿಯ ದರ್ಶನಕ್ಕೆ ಗದ್ದುಗೆ ಬಳಿ ತೆರಳಲು ಉದ್ಯಮಿಯೊಬ್ಬರು ಉಚಿತವಾಗಿ ಆಟೋ ಸೇವೆ ಕಲ್ಪಿಸಿ ಮಾದರಿಯಾಗಿದ್ದಾರೆ.

ಜಾತ್ರೆ ಸಂದರ್ಭದಲ್ಲಿ ಮಾರಿಕಾಂಬಾ ದೇವಿ ವಿರಾಜಮಾನವಾಗಿರುವ ಬಿಡ್ಕಿಬಯಲಿನ ಸುತ್ತಲಿನ ಪ್ರದೇಶ ಭಕ್ತರಿಂದ ತುಂಬಿರುತ್ತದೆ. ಹೀಗಾಗಿ ಇಲ್ಲಿಗೆ ಯಾವುದೇ ಮಾರ್ಗಗಳಿಂದ ವಾಹನಗಳು ಬರುವುದನ್ನು ಜಾತ್ರೆಯಲ್ಲಿ ನಿಷೇಧಿಸಲಾಗುತ್ತದೆ. ಇಂಥ ಸಂದರ್ಭದಲ್ಲಿ ಅರ್ಧ ಕಿ.ಮೀ. ದೂರದಿಂದ ವಾಹನ ಇಳಿದು ಭಕ್ತರು ನಡೆದು ಬರಬೇಕಾಗುತ್ತದೆ. ಇದರಿಂದ ದೇವಿಯ ದರ್ಶನ ಪಡೆಯಬೇಕು ಎಂಬ ಬಯಕೆಯಿರುವ ಅಂಗವಿಕಲರು, ವೃದ್ಧರು, ಗರ್ಭಿಣಿಯರು ತೆರಳುವುದು ಕಷ್ಟವಾಗುತ್ತದೆ. ಅದರಲ್ಲೂ ಜನಸಂದಣಿಯ ಮಧ್ಯೆ ನುಸುಳಿ ಸಾಗುವುದು ಅಸಾಧ್ಯದ ಮಾತು. ಇಂಥ ತೊಂದರೆ ನಿವಾರಿಸಲು ಇಲ್ಲಿಯ ಸಿಂಪಿಗಲ್ಲಿಯ ಪ್ರದೀಪ ಜುವೆಲರಿ ಮಾಲೀಕ ಪ್ರದೀಪ ಎಲ್ಲನಕರ್ ಉಚಿತವಾಗಿ ಎರಡು ಆಟೋಗಳನ್ನು ಸೇವೆಗಾಗಿ ನೀಡಿದ್ದಾರೆ. ನಗರದ ಕೋಟೆಕೆರೆ ಹಾಗೂ ಐದು ರಸ್ತೆ ಸರ್ಕಲ್ ಬಳಿಯಿಂದ ಈ ಆಟೋಗಳು ಅಂಗವಿಕಲರು, ವೃದ್ಧರು, ಗರ್ಭಿಣಿಯರನ್ನು ಗದ್ದುಗೆ ಬಳಿ ಕರೆದೊಯ್ದು ದರ್ಶನ ಮಾಡಿಸುವುದು, ಬಳಿಕ ಪುನಃ ಅದೇ ಸ್ಥಳಕ್ಕೆ ಬಿಡುವುದು. ಜಾತ್ರೆ ಆರಂಭದಿಂದ ಈವರೆಗೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಈ ಆಟೊದಲ್ಲಿ ತೆರಳಿ ದೇವಿ ದರ್ಶನ ಪಡೆದಿದ್ದಾರೆ.

ಜಾತ್ರೆಯಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣೆಗೂ ಎಲ್ಲನ್ಕರ್ ವ್ಯವಸ್ಥೆ ಮಾಡಿದ್ದಾರೆ. ಅಗತ್ಯವಿರುವವರು ಬೆಳಗ್ಗೆ ಹಾಗೂ ಸಂಜೆ ವೇಳೆ ಇಲ್ಲಿಯ ಜಾತ್ರಾ ಪೊಲೀಸ್ ಠಾಣೆ ಬಳಿ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಜಾತ್ರೆಯಲ್ಲಿ ಹಣ್ಣುಕಾಯಿ ಇತರ ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸುವವರಿಗೆ 40 ಸಾವಿರ ಬ್ಯಾಗ್​ಗಳನ್ನು ಸಹ ವಿತರಿಸಲಾಗಿದೆ.

ಕಳೆದ ಕೆಲವು ಜಾತ್ರೆಯಿಂದ ದೇವಿಯ ದರ್ಶನಕ್ಕೆ ಬರಲಾಗಲಿಲ್ಲ. ಆದರೆ, ಒಮ್ಮೆ ಬಂದು ದೇವಿಯ ದರ್ಶನ ಭಾಗ್ಯ ಪಡೆಯಬೇಕು ಎಂಬ ಆಸೆಯಿತ್ತು. ಗದ್ದುಗೆ ಬಳಿ ತೆರಳಲು ಆಟೋ ಸೇವೆ ಇದೆ ಎಂಬುದು ತಿಳಿದುಕೊಂಡಿದ್ದೆ. ಇದೀಗ ಬಂದು ದೇವಿಯ ದರ್ಶನ ಪಡೆದು ಕೃತಾರ್ಥನಾಗಿದ್ದೇನೆ.| ಯಮುನಾ ಗೌಡ ವೃದ್ಧೆ

ದೇವಿಯಲ್ಲಿ ಮಕ್ಕಳಾಗಲಿ ಎಂದು ಹರಕೆ ಹೊತ್ತು ಬರುವವರು ಹಲವರು. ಅವರೆಲ್ಲ ಈಗ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಗರ್ಭಿಣಿಯರು ಹಾಗೂ ಎರಡ್ಮೂರು ತಿಂಗಳ ಮಗುವಿನೊಂದಿಗೆ ಬಾಣಂತಿಯರು ಆಗಮಿಸಿ ದೇವಿಕೆ ಹರಕೆ ಸಲ್ಲಿಸುತ್ತಿದ್ದಾರೆ. ಅವರಿಗೆಲ್ಲ ಈ ಆಟೋ ಸೇವೆ ಅನುಕೂಲವಾಗಿದೆ. ಇನ್ನು ವೃದ್ಧರು, ಅಂಗವಿಕಲರಿಗೂ ಈ ಸೇವೆ ನೆರವಾಗಿದೆ.| ಪ್ರದೀಪ ಎಲ್ಲನ್ಕರ್ ಉದ್ಯಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net