

ರಮೇಶ ಹಾರ್ಸಿಮನೆ ಸಿದ್ದಾಪುರ
30 ವರ್ಷಗಳಿಂದ ಪರಿಸರ ಜಾಗೃತಿ ಮೂಡಿಸುತ್ತ ಇರುವ ಅಪರೂಪದ ವ್ಯಕ್ತಿ ಸಿದ್ದಾಪುರ ಪಟ್ಟಣದ ಸಮೀಪದ ವಡ್ಡಿನಗದ್ದೆಯ ಗಣಪತಿ ಹೆಗಡೆ. ವಿನಾಶದಂಚಿನಲ್ಲಿರುವ ಕಾಡುಬೀಜಗಳನ್ನು ಸಂಗ್ರಹಿಸಿ ಸಸಿಗಳನ್ನು ಬೆಳೆಸಿ ಆಸಕ್ತರಿಗೆ ವಿತರಿಸುತ್ತ ಜೀವವೈವಿಧ್ಯ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರಗತಿಪರ ಕೃಷಿಕ ಮಹಾಬಲೇಶ್ವರ ಹೆಗಡೆ ಅವರ ಪುತ್ರರಾಗಿರುವ ಇವರು ಚಿಕ್ಕಂದಿನಲ್ಲಿಯೇ ತಂದೆಯ ಸಂಗಡ ಗುಡ್ಡ ಬೆಟ್ಟ ಹತ್ತಿ ಅಲ್ಲಿರುವ ಗಿಡ-ಮರಗಳ ಪರಿಚಯ ಮಾಡಿಕೊಂಡರು. ನಂತರದ ದಿನಗಳಲ್ಲಿ ಅವರು ಭಾರತೀ ಸಂಪದ ಎಂಬ ಸಂಸ್ಥೆ ಕಟ್ಟಿಕೊಂಡು ಸಾವಿರ ಬೀಜ-ಸಹಜ ಕಾಡು ಘೊಷವಾಕ್ಯದೊಂದಿಗೆ ಪರಿಸರ ಆಸಕ್ತರಿಗೆ, ಪಟ್ಟಣದ ಧನ್ವಂತರಿ ಆಯುರ್ವೆದ ಮಹಾವಿದ್ಯಾಲಯ, ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವ ಹಾಗೂ ಕಾಡುಬೀಜಗಳ ಪರಿಚಯ ಮಾಡಿಕೊಡುತ್ತಾ ಇದ್ದಾರೆ.
ಬಿಳಿ ಬೂರಲ, ಬಿಳಿ ಮುರಗಲ, ಪಾಟಲಿ, ಪುತ್ರಂಜೀವಿ, ಬಿಳಿ ಮುತ್ತುಗ, ಕೆಂಪು ಉಪ್ಪಾಗೆ,ಕೆಂಪು ನೇರಳೆ, ಬಿಳಿಮತ್ತಿ, ದೇವದಾರು, ಸರ್ಪಗಂದಿ, ಜಾಲ, ಪರ್ಕಬಾಳೆ, ಹಾಳೆ, ತುಂಬ್ರಿ ಹಣ್ಣು, ಅಂಕೋಲೆ, ಪರಗಿ, ಕವಳಿ, ರಂಜಲು, ಏಕನಾಯಕ ಸೇರಿ ನೂರಕ್ಕೂ ಹೆಚ್ಚು ಜಾತಿ ಗಿಡ, ಹಣ್ಣು ಹಾಗೂ ಔಷಧ ಸಸ್ಯಗಳ ಬೀಜಗಳನ್ನು ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಅಡವಿಗೆ ತೆರಳಿ ಸಂಗ್ರಹಿಸಿದ್ದಾರೆ. ಅವುಗಳನ್ನು ಸಸಿ ಮಾಡಿ ಅರಣ್ಯ ಇಲಾಖೆಗೆ ಹಾಗೂ ಕೆಲವು ಪರಿಸರ ಆಸಕ್ತರಿಗೆ ನೀಡುತ್ತಿದ್ದಾರೆ. ಅಲ್ಲದೆ, 12 ವರ್ಷದಿಂದ ತಮ್ಮ ಮನೆಯಲ್ಲಿಯೇ ಪರಿಸರ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಜತೆಯಲ್ಲಿ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಸಸ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಗುರುತಿಸಿ ಸನ್ಮಾನಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತೋಟ-ಗದ್ದೆಗಳಿಗೆ ಮಂಗನ ಹಾವಳಿ ಹೆಚ್ಚಾಗಿದ್ದು, ಇದರಿಂದ ಬೆಳೆ ನಾಶವಾಗುತ್ತಿದೆ. ಇದನ್ನು ತಡೆಯಲು ಮುಂದಿನ ವರ್ಷ ಬಾಲಿಕೊಪ್ಪ ಗ್ರಾಮದ ಎಲ್ಲ ತೋಟಿಗರಿಗೂ ಹಣ್ಣಿನ ಗಿಡಗಳನ್ನು ಉಚಿತವಾಗಿ ವಿತರಿಸಿ, ಅವುಗಳನ್ನು ತೋಟದ ಸುತ್ತಲೂ ನೆಡುವಂತೆ ಮನವರಿಕೆ ಮಾಡಿಕೊಡುವ ಉದ್ದೇಶ ಹೊಂದಿದ್ದೇನೆ.| ಗಣಪತಿ ಹೆಗಡೆ ವಡ್ಡಿನಗದ್ದೆ
ಪರಿಸರ ದಿನಾಚರಣೆ ಇಂದು: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೂ. 5ರಂದು ಬೆಳಗ್ಗೆ 10.30ಕ್ಕೆ ವಡ್ಡಿನಗದ್ದೆಯಲ್ಲಿ ‘ಹಸಿರನೆಟ್ಟು- ಭುವಿಗೆ ಬೀಜವನಿಟ್ಟು’ ಕಾರ್ಯಕ್ರಮ ನಡೆಯಲಿದೆ. ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ತಹಸೀಲ್ದಾರ್ ಮಂಜುಳಾ ಭಜಂತ್ರಿ, ಸಿಪಿಐ ಪ್ರಕಾಶ, ಅರಣ್ಯ ಇಲಾಖೆ ಅಧಿಕಾರಿಗಳು, ಪತ್ರಕರ್ತ ನಾಗರಾಜ ನಾಯ್ಕ ಮಾಳ್ಕೋಡ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.