

ನಂಜನಗೂಡು: ಕಬ್ಬು ಬೆಳೆಗಾರರು ಹಾಗೂ ರೈತ ಸಂಘಟನೆಗಳ ಒತ್ತಾಯದ ಮೇರೆಗೆ ತಾಲೂಕಿನ ಅಳಗಂಚಿ ಗ್ರಾಮದ ಸಕ್ಕರೆ ಕಾರ್ಖಾನೆ ಗೇಟ್ ಬಳಿ ತೂಕದ ಯಂತ್ರ ಅಳವಡಿಸುವ ಕುರಿತು ಶುಕ್ರವಾರ ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿಕುಮಾರ್, ಆಹಾರ ಉಪ ನಿರ್ದೇಶಕ ಮಂಟೇಸ್ವಾಮಿ ಹಾಗೂ ರೈತರು ತೆರಳಿ ಸ್ಥಳ ಪರಿಶೀಲನೆ ನಡೆಸಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಡ್ಯ ರವಿ ಮಾತನಾಡಿ, ಬಣ್ಣಾರಿಯಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ತೂಕದ ಯಂತ್ರವನ್ನು ಗೇಟ್ ಮುಂಭಾಗ ಅಳವಡಿಸಬೇಕೆಂದು ಹಲವು ದಿನಗಳಿಂದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ರೈತ ಸಂಘ ಹೋರಾಟ ಮಾಡುತ್ತಿದ್ದು, ಜತೆಗೆ ಜಿಲ್ಲಾಧಿಕಾರಿಗಳು ರೈತರ ಸಭೆಯಲ್ಲಿ ಅಧಿಕಾರಿಗಳ ತಂಡ ರಚನೆ ಮಾಡಿ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು, ಆಹಾರ ಉಪ ನಿರ್ದೇಶಕರು, ಅಳತೆ ಮತ್ತು ತೂಕ ಮಾಪನ ಇಲಾಖೆ ಅಧಿಕಾರಿಗಳ ಜತೆಗೆ ಸ್ಥಳೀಯ ರೈತ ಮುಖಂಡರು ಒಳಗೊಂಡಂತೆ ಕಾರ್ಖಾನೆ ಬಳಿ ಸ್ಥಳ ಪರಿಶೀಲಿಸಿದ್ದಾರೆ. ಸಕ್ಕರೆ ಅಭಿವೃದ್ಧಿ ಆಯುಕ್ತರು 2024ರಲ್ಲಿ ಕಾರ್ಖಾನೆ ಮಾಲೀಕರಿಗೆ ಲಿಖಿತವಾಗಿ ಪತ್ರ ಬರೆದಿರುತ್ತಾರೆ. ಆ ಪತ್ರವನ್ನು ಕಾರ್ಖಾನೆ ಆಡಳಿತ ಮಂಡಳಿ ಪರಿಶೀಲಿಸದೆ ಬೇರೆ ರೀತಿ ನೆಪವೊಡ್ಡಿ ರೈತರಿಗೆ ಸುಳ್ಳು ಹೇಳುವುದರ ಜತೆಗೆ ಕಾಲಹರಣ ಮಾಡುತ್ತಿದ್ದರು. ಸ್ಥಳಕ್ಕೆ ಬಂದಿರುವ ಅಧಿಕಾರಿಗಳ ತಂಡ ಪರಿಶೀಲಿಸಿ ನೋಡಿ, ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಮಾತನಾಡಿದರು.
ಕಾರ್ಖಾನೆ ಮುಂಭಾಗ ಸರ್ಕಾರಿ ಜಾಗ ಅಥವಾ ಖಾಸಗಿ ಜಾಗವನ್ನು ಗುರುತಿಸಿ ಕೊಡಬೇಕೆಂದು ಕಾರ್ಖಾನೆಗೆ ತಿಳಿಸಲಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ಆಡಳಿತ ಮಂಡಳಿ ಒಪ್ಪಿಕೊಂಡಿದ್ದು, ಕಬ್ಬು ಬೆಳೆಗಾರರಲ್ಲಿ ಮಂದಹಾಸ ಮೂಡಿದೆ ಎಂದು ತಿಳಿಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಹಾಡ್ಯ ರವಿ, ಮುದ್ದಹಳ್ಳಿ ಚಿಕ್ಕಸ್ವಾಮಿ, ಕೆ ಹುಂಡಿ ಮಹೇಶ್, ಮರಿಸ್ವಾಮಿ, ಸಿದ್ದರಾಜು, ನಾಗೇಶ್, ತಗಡೂರು ಉಮೇಶ್, ಸಿದ್ದಪ್ಪ, ಶಂಕರ್, ನಂಜನಹಳ್ಳಿ ರವಿ, ಮಹೇಶ್, ಪಿ.ವಿಜಯೇಂದ್ರ, ಸೋಮಶೇಖರ್ ಹಾಗೂ ರೈತರು ಭಾಗವಹಿಸಿದ್ದರು.