ಅಲೆಮಾರಿ ಜನಾಂಗಕ್ಕೆ ಆಹಾರ, ಪಡಿತರ ಚೀಟಿ ವ್ಯವಸ್ಥೆ

31 rtl 01
Published on

ರಟ್ಟಿಹಳ್ಳಿ: ಪಟ್ಟಣದ ಹೊರಲವಯದಲ್ಲಿ ವಾಸಿಸು ತ್ತಿರುವ ಅಲೆಮಾರಿ ಜನರಿಗೆ ಆಹಾರ ವಿತರಿಸುವಂತೆ ಸಚಿವ ಬಿ.ಸಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಲಾಕ್​ಡೌನ್ ಜಾರಿ ಹಿನ್ನೆಲೆಯಲ್ಲಿ ಅಹಾರದ ಸಮಸ್ಯೆ ಎದುರಿಸುತ್ತಿರುವ ಅಲೆಮಾರಿ ಜನ ಮಂಗಳವಾರ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಗಮಿಸಿ ಸಚಿವರ ಎದುರು ಅಳಲು ತೋಡಿಕೊಂಡರು. ಅದಕ್ಕೆ ಸ್ಪಂದಿಸಿದ ಪಾಟೀಲ ಅವರು, ‘ಅಲೆಮಾರಿ ಜನರಿಗೆ ಅಗತ್ಯ ಪಡಿತರ ಒದಗಿಸಿ, ಆಹಾರದ ಸಮಸ್ಯೆಯಾಗದಂತೆ ನೋಡಿಕೊಳ್ಳಿ’ ಎಂದು ತಹಸೀಲ್ದಾರರಾದ ಕೆ.ಗುರುಬಸವರಾಜ ಮತ್ತು ಆರ್.ಎಚ್. ಬಾಗವಾನ್, ಉಪ ತಹಸೀಲ್ದಾರ್ ಎಸ್.ಎನ್. ಮಲ್ಲಾಡದ, ಅಹಾರ ನಿರೀಕ್ಷಕ ಅರುಣ ಕಾರ್ಗಿ, ಸಿ.ಕೆ. ಹೆದ್ದಾಳಿ ಅವರಿಗೆ ಸೂಚಿಸಿದರು. ರೇಷನ್ ಕಾರ್ಡ್ ಇಲ್ಲದವರಿಗೆ ಗ್ರಾಮ ಪಂಚಾಯಿತಿಯಿಂದ ಅಹಾರದ ವ್ಯವಸ್ಥೆ ಮಾಡುವಂತೆ ಪಿಡಿಒ ಪ್ರಕಾಶ ಸುಂಕಾಪುರಗೆ ಸೂಚಿಸಿದರು.

ಪಟ್ಟಣದ ರವಿಯಣ್ಣ ಹರಿವಿಶೆಟ್ಟರ್ ಅವರ ಜಮೀನಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿದ್ದು, ಅಲ್ಲಿ ತಾತ್ಕಲಿವಾಗಿ ವಾಸ ಮಾಡಿ, ಮುಂದಿನ ದಿನಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು. ಗ್ರಾಪಂ ಅಧ್ಯಕ್ಷೆ ರೇಣುಕಾ ಕಮತಹಳ್ಳಿ, ಉಪಾಧ್ಯಕ್ಷ ಗೋಪಾಲ ಮಡಿವಾಳ, ವೈದ್ಯಾಧಿಕಾರಿ ಡಾ.ಲೋಕೇಶ ಕುಮಾರ, ಗ್ರಾ.ಪಂ. ಸದಸ್ಯರಾದ ಸುಭಾಷ ಹದಡೇರ, ಬಾಬು ವೆರ್ಣಿಕರ, ರಾಜು ಪವಾರ, ರಿಯಾಜ್ ನರಗುಂದಕರ, ಇಲಿಯಾಸ ಮೇಡ್ಲೇರಿ, ಶಂಕ್ರುಗೌಡ ಚೆನ್ನಗೌಡ, ಇದ್ದರು. ಅಲೆಮಾರಿ ಜನಾಂಗದವರಿಗೆ ಗ್ರಾಪಂ ಮತ್ತು ಸಾರ್ವಜನಿಕರ ಸಹಕಾರದಿಂದ ತರಕಾರಿ, ಹಣ್ಣು, ತಿಂಡಿ ತಿನಿಸು ಪೂರೈಸಲಾಯಿತು ಎಂದು ಪಿಡಿಒ ತಿಳಿಸಿದರು.

ರಟ್ಟಿಹಳ್ಳಿ ಮತ್ತು ಮಾಸೂರು ಬಳಿ ವಾಸವಾಗಿರುವ ಅಲೆಮಾರಿ ಜನಾಂಗದವರನ್ನು ಭೇಟಿ ಮಾಡಿದ್ದೇನೆ. ಅವರಲ್ಲಿರುವ ರೇಷನ್ ಕಾರ್ಡ್​ದಾರರಿಗೆ 2-3 ತಿಂಗಳ ರೇಷನ್ ಶೀಘ್ರವಾಗಿ ನೀಡಲಾಗುತ್ತದೆ. ಕಾರ್ಡ್ ಇಲ್ಲದವರನ್ನು ಪಟ್ಟಿ ಮಾಡಿ ರೇಷನ್ ಕಾರ್ಡಿನ ವ್ಯವಸ್ಥೆ ಮಾಡುವಂತೆ ಇಲಾಖೆಗೆ ಸೂಚಿಸಲಾಗಿದೆ. ನಿರ್ಗತಿಕರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಆಹಾರದ ವ್ಯವಸ್ಥೆ ಮಾಡಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
| ಕೆ.ಗುರುಬಸವರಾಜ ತಹಸೀಲ್ದಾರ್

ಗ್ರಾಪಂ ಕಾರ್ಯಪಡೆಗೆ ಇಲ್ಲ ಸುರಕ್ಷತಾ ಸಾಧನ

ಹಾವೇರಿ: ಜಿಲ್ಲೆಯ ಗ್ರಾ.ಪಂ.ಗಳಲ್ಲಿ ಸರ್ಕಾರದ ಸೂಚನೆಯಂತೆ ಈಗಾಗಲೇ ಕಾರ್ಯಪಡೆಗಳನ್ನು ರಚಿಸಲಾಗಿದೆ. ಈ ಕಾರ್ಯಪಡೆಗಳಿಂದ ಗ್ರಾಮಕ್ಕೆ ಬೇರೆ ಊರುಗಳಿಂದ ಬಂದವರ ಮೇಲೆ ನಿಗಾ ವಹಿಸಲಾಗಿದೆ. ಆದರೆ, ಈ ಕಾರ್ಯಪಡೆ ಸಿಬ್ಬಂದಿಗೆ ಸುರಕ್ಷಾ ಸಾಮಗ್ರಿ ನೀಡದಿರುವುದು ದುರ್ದೈವ.

ಕಾರ್ಯಪಡೆಗಳು ರಚನೆಯಾಗುತ್ತಿದ್ದಂತೆಯೇ ಗ್ರಾಮದಲ್ಲಿ ಯಾರೂ ಅನ್ಯರು ಪ್ರವೇಶಿಸಬಾರದು ಎಂದು ಕೆಲವು ಕಡೆಗಳಲ್ಲಿ ಕಾರ್ಯಪಡೆಗಳ ನೇತೃತ್ವದಲ್ಲಿಯೇ ಬೇಲಿ ಹಾಕಲಾಗಿದೆ. ಗ್ರಾಮದಿಂದ ಉದ್ಯೋಗ ಅರಸಿ ಬೇರೆಕಡೆ ಹೋದವರು ಮರಳಿ ಗ್ರಾಮಕ್ಕೆ ಬಂದಾಗ ಅವರನ್ನು ಆಸ್ಪತ್ರೆಗಳಿಗೆ ಕಳಿಸಿ ತಪಾಸಣೆಯ ವರದಿ ತಂದ ನಂತರ ಗ್ರಾಮಕ್ಕೆ ಸೇರಿಸಿಕೊಳ್ಳಲಾಗಿದೆ. ಅಲ್ಲದೆ, ಅವರು 14 ದಿನಗಳ ಕಾಲ ಹೋಮ್ ಕ್ವಾರಂಟೈನ್​ನಲ್ಲಿರಲು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೂಚಿಸಿ, ನಿಗಾ ವಹಿಸಿದ್ದಾರೆ. ಗ್ರಾ.ಪಂ. ಸಿಬ್ಬಂದಿ ಬೀದಿ, ಚರಂಡಿ ಸ್ವಚ್ಛತೆಯಲ್ಲಿ ನಿರತರಾಗಿದ್ದಾರೆ. ಜ್ವರ, ಕೆಮ್ಮು, ನೆಗಡಿಯಿಂದ ಬಳಲುವವರನ್ನು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಶುದ್ಧ ಕುಡಿಯುವ ನೀರು, ಪಡಿತರ ಅಂಗಡಿ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸುತ್ತಿದ್ದಾರೆ.

ಸಿಬ್ಬಂದಿಗೆ ಬೇಕು ಸುರಕ್ಷತಾ ಸಾಧನ: ಸರ್ಕಾರದ ಸೂಚನೆಯಂತೆ ಗ್ರಾ.ಪಂ. ಕಾರ್ಯಪಡೆ ರಚಿಸಿ ಕೆಲಸ ಮಾಡಲಾಗುತ್ತಿದೆ. ಆದರೆ, ಕೆಲವೊಮ್ಮೆ ಶಂಕಿತ ರೋಗಿಗಳ ಬಳಿ ಹೋಗಿ ಅವರನ್ನು ಚಿಕಿತ್ಸೆಗೆ ಕಳಿಸಲು ಕಾರ್ಯಪಡೆ ಯಲ್ಲಿರುವ ಸಿಬ್ಬಂದಿ ಮುಂದಾಗ ಬೇಕಾಗುತ್ತದೆ. ಆದರೆ, ಈ ಸಿಬ್ಬಂದಿಗೆ ಮಾಸ್ಕ್, ಹ್ಯಾಂಡ್​ಗ್ಲೌಸ್, ಸ್ಯಾನಿಟೈಜರ್ ಸೇರಿ ಯಾವುದೇ ಸುರಕ್ಷತಾ ಸಾಮಗ್ರಿಗಳನ್ನು ಸರ್ಕಾರ ಪೂರೈಸಿಲ್ಲ. ಬೀದಿ ಗಳಲ್ಲಿ ನೈರ್ಮಲ್ಯ ಕಾಪಾಡಲು ವಿವಿಧ ಕ್ರಿಮಿನಾಶಕ ಸಿಂಪಡಿಸುವವರಿಗೂ ಯಾವುದೇ ಸುರಕ್ಷತಾ ಕಿಟ್​ಗಳನ್ನು ಪೂರೈಸಿಲ್ಲ. ಹೀಗಾಗಿ ಸಿಬ್ಬಂದಿ ಭಯದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.

ಕೂಡಲೆ ಆರೋಗ್ಯ ಇಲಾಖೆಯಿಂದ ಸುರಕ್ಷಾ ಕಿಟ್​ಗಳನ್ನು ಗ್ರಾ.ಪಂ. ಕಾರ್ಯಪಡೆಗೆ ವಿತರಿಸುವ ಕೆಲಸವಾಗಬೇಕು ಎಂದು ಯಲಗಚ್ಚ ಗ್ರಾ.ಪಂ. ಅಧ್ಯಕ್ಷ ನಾಗರಾಜ ಕೋಣನವರ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net