

ಸರಗೂರು: ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಅನುಮೋದನೆ ಪತ್ರವನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದು, ಅರ್ಹರು ಸದುಪಯೋಗಪಡಿಸಿಕೊಳ್ಳುವಂತೆ ಉಪ ತಹಸೀಲ್ದಾರ್ ಮಹದೇವಮೂರ್ತಿ ಸಲಹೆ ನೀಡಿದರು.
ತಾಲೂಕಿನ ಮುಳ್ಳೂರು ಗ್ರಾಪಂ ವ್ಯಾಪ್ತಿಯ ಮುಳ್ಳೂರು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಸಾಮಾಜಿಕ ಭದ್ರತಾ ಯೋಜನೆಗಳ ಕಂದಾಯ ಅದಾಲತ್ ಹಾಗೂ ಪಿಂಚಣಿ ಈ ಪೌತಿ ಖಾತೆ ಅದಾಲತ್ ಮತ್ತು ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ. ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಅನುದಾನ ಬಿಡುಗಡೆಗೊಳಿಸುತ್ತಿದೆ. ಆದರೆ ಇದು ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂಬ ಕಾರಣದಿಂದ ಪ್ರತಿ ತಿಂಗಳ 15ರೊಳಗೆ ಜನರ ಬಳಿ ಹೋಗಿ ಅರ್ಹರನ್ನು ಗುರುತಿಸಿ ಮನೆ ಬಾಗಿಲಿಗೆ ಪಿಂಚಣಿ ಅನು ಮೋದನೆ ಪತ್ರ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಕಂದಾಯ ನಿರೀಕ್ಷಕರು ಗ್ರಾಮಲೆಕ್ಕಿಗರಿಗೆ ತಮ್ಮ ಅರ್ಜಿ ಸಲ್ಲಿಸಬಹುದು. ಸ್ಥಳೀಯ ಮುಖಂಡರು ಅರ್ಹರನ್ನು ಗುರುತಿಸಲು ಇಲಾಖೆ ಅಧಿಕಾರಿಗಳಿಗೆ ಸಹಕರಿಸಬೇಕು ಎಂದರು.
ರಾಜಸ್ವ ನಿರೀಕ್ಷಕ ರವಿಚಂದ್ರನ್ ಮಾತನಾಡಿ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ನಾಲ್ಕು ವಿಭಾಗದಲ್ಲಿ ಸಾಮಾಜಿಕ ಭದ್ರತಾ ಯೋಜನೆ ಅಳವಡಿಸಲಾಗಿದೆ. ಆದರೆ ಫಲಾನುಭವಿಗಳು ಸ್ಥಳಿಯ ಬ್ಯಾಂಕ್‌ಗಳಲ್ಲಿ ಬ್ಯಾಂಕ್ ಖಾತೆ ಆರಂಭಿ ಸಿದರೆ ನೇರವಾಗಿ ಹಣ ಖಾತೆಗೆ ಜಮಾವಣೆಯಾಗಲಿದೆ. ಅರ್ಹರಿಗೆ ಪಿಂಚಣಿ ಪಡೆಯಲು ಸೂಕ್ತ ದಾಖಲಾತಿ ನೀಡಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಸಾಮಾಜಿಕ ಹೋರಾಟಗಾರ ಗ್ರಾಮೀಣ ಮಹೇಶ್, ಕಾಂಗ್ರೇಸ್ ಎಸ್ಸಿ-ಎಸ್ಟಿ ಜಿಲ್ಲಾ ಸಮಿತಿ ಸದಸ್ಯ ಹಾಗೂ ಮಾಜಿ ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷೆ ಚಿನ್ನಮ್ಮ ರಾಮನಾಯಕ ಮಾತನಾಡಿದರು. 10 ಫಲಾನುಭವಿಗಳಿಗೆ ಪಿಂಚಣಿ ಯೋಜನೆಯಡಿ ಆದೇಶ ಪತ್ರ ವಿತರಿಸಲಾಯಿತು.
ಮುಳ್ಳೂರು ಗ್ರಾಪಂ ಗೋವಿಂದಾಚಾರ್, ಶಿವಚನ್ನಪ್ಪ, ತಾಪಂ ಮಾಜಿ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಜೀವಿಕ ಮಹೇಶ್, ಶಿವರಾಜಪ್ಪ, ಬಿಲ್ ಕಲೆಕ್ಟರ್ ನಾಗರಾಜು, ಚನ್ನನಾಯಕ, ಯಜಮಾನರು ಚಿಕ್ಕಮಹದೇವಯ್ಯ, ವೃಷಭೇಂದ್ರಪ್ಪ, ಗ್ರಾಮಲೆಕ್ಕಿಗರಾದ ಕುಮಾರ್, ಪುರುಷೋತ್ತಮ್, ಸತ್ಯನಾರಾಯಣ, ಚಂದ್ರಶೇಖರ, ಹೇಮಂತ್‌ಕುಮಾರ್, ಚೈತ್ರಾ, ಉಷಾ, ತಸ್ಮೀಯ, ಗ್ರಾಮಸೇವಕ ಸಿದ್ದರಾಜು, ನಾಗೇಂದ್ರ, ಶಿವರಾಜು ಇದ್ದರು.