ಅರ್ಕಾವತಿ ಸೇತುವೆಯಲ್ಲಿದ್ದ ಗಿಡ-ಗಂಟಿ ತೆರವು

kkk
Published on

ರಾಮನಗರ: ನಗರದ ಪ್ರಮುಖ ಅರ್ಕಾವತಿ ಸೇತುವೆ ಅಕ್ಕಪಕ್ಕ ಬೆಳೆದಿದ್ದ ಗಿಡ-ಗಂಟಿ ತೆರವು ಮಾಡಲು ನಗರಸಭೆ ಮುಂದಾಗಿದೆ.
ರಾಮನಗರದ ಹೃದಯಭಾಗದಲ್ಲಿ ಅರ್ಕಾವತಿ ನದಿ ಹಾದು ಹೋಗಿದೆ. ನದಿಯ ಎರಡೂ ಭಾಗದಲ್ಲಿ ನಗರ ಬೆಳೆದಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಬೆಂಗಳೂರು- ಮೈಸೂರು ರಸ್ತೆಗೆ ಸಂಪರ್ಕಕಲ್ಪಿಸುವ ಹಳೇ ಬಸ್ ನಿಲ್ದಾಣ ಸಮೀಪ ರೈಲ್ವೆ ನಿಲ್ದಾಣ ರಸ್ತೆಗೆ ಹೋಗಲು ಮುಖ್ಯರಸ್ತೆಯಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ, ಈ ಸೇತುವೆ ಉದ್ದಕ್ಕೂ ಅರಳಿ ವೃಕ್ಷಗಳು ಆಳೆತ್ತರಕ್ಕೆ ಬೆಳೆದು ಸೇತುವೆ ಶಿಥಿಲಾವಸ್ಥೆಗೆ ತಲುಪುವಂತಾಗಿತ್ತು.

ಈ ಸಂಬಂಧ ‘ವಿಜಯವಾಣಿ’ಆ.1ರಂದು ‘ಅರ್ಕಾವತಿ ಸೇತುವೆಗೆ ಗಿಡ-ಗಂಟಿ ಕಂಟಕ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ಬೆನ್ನಲ್ಲೆ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಶುಕ್ರವಾರ ಸೇತುವೆ ಅಕ್ಕಪಕ್ಕದಲ್ಲಿ ಬೆಳೆದ ಅರಳಿ ವೃಕ್ಷ, ಗಿಡ ಗಂಟಿ ತೆರವು ಮಾಡಲು ಮುಂದಡಿ ಇಟ್ಟಿದ್ದು, ನದಿಯಲ್ಲಿ ನೀರು ಇರುವ ಕಾರಣ ದೊಡ್ಡ ಕ್ರೇನ್ ನೆರವಿನೊಂದಿಗೆ ಗಿಡ ಗಂಟಿ ತೆರವು ಮಾಡಿದರು. ಖುದ್ದು ನಗರಸಭೆ ಪೌರಾಯುಕ್ತ ಡಾ. ಜಯಣ್ಣ ಸ್ಥಳದಲ್ಲಿದ್ದು, ತೆರವು ಕಾರ್ಯಾಚರಣೆ ವೀಕ್ಷಿಸಿ ಕೆಲಸಗಾರರಿಗೆ ನಿರ್ದೇಶನ ನೀಡಿದರು.

ಕೆಮಿಕಲ್ ಬಳಕೆ: ಸೇತುವೆ ಅಕ್ಕಪಕ್ಕ ಬೆಳೆದಿದ್ದ ಮರದ ಬೇರು ಸಿಮೆಂಟ್ ಒಳಗೆ ಹೋಗಿದೆ. ಆದ್ದರಿಂದ ಪುನಃ ಚಿಗುರದಂತೆ ಗಿಡದ ಬುಡಕ್ಕೆ ಕೆಮಿಕಲ್ ಬಳಸಲು ನಗರಸಭೆ ಅಧಿಕಾರಿಗಳು ಉಪಾಯ ಮಾಡಿದ್ದಾರೆ.

ಸಾಮಾಜಿಕ ಕಳಕಳಿಯುಳ್ಳ ಪತ್ರಿಕೆಯಾಗಿ ‘ವಿಜಯವಾಣಿ’ ಸಾಕಷ್ಟು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಪುರಾತನ ರಾಮನಗರದ ಅರ್ಕಾವತಿ ಸೇತುವೆ ಶಿಥಿಲಾವಸ್ಥೆಗೆ ತಲುಪುತ್ತಿರುವ ಬಗ್ಗೆ ಜನರ ಮನವಿ ಮೇರೆಗೆ ವರದಿ ಪ್ರಕಟಿಸಿ ನಗರಸಭೆ ಅಧಿಕಾರಿಗಳ ಕಣ್ಣು ತೆರೆಸಿ ಸೇತುವೆ ನಿರ್ವಹಣೆಗೆ ಕಾರಣವಾಗಿದೆ.

ಸೇತುವೆ ಅಕ್ಕಪಕ್ಕ ಬೆಳೆದ ಗಿಡ-ಗಂಟಿ ತೆರವು ಮಾಡಿ ಎಂದು ಕಳೆದ 2 ವರ್ಷಗಳಿಂದಲೂ ಮನವಿ ಮಾಡಿದ್ದೆವು. ಹೊಸದಾಗಿ ಬಂದ ಪೌರಾಯುಕ್ತರು ಸ್ಪಂದಿಸಿರುವುದು ಸಂತಸವಾಗಿದೆ.ವಿಜಯಕುಮಾರ್, ಸ್ಥಳೀಯ ನಿವಾಸಿ, ರಾಮನಗರ. ನದಿಯಲ್ಲಿ ನೀರು ಹರಿಯುತ್ತಿರುವ ಕಾರಣ ಮುಂಜಾಗ್ರತಾ ಕ್ರಮ ಅನುಸರಿಸಿ ದೊಡ್ಡ ಕ್ರೇನ್ ಬಳಸಿಕೊಂಡು ಕಾರ್ಮಿಕರ ನೆರವನಿಂದ ಗಿಡ-ಗಂಟಿ ತೆರವು ಮಾಡಿಸಲಾಗುತ್ತಿದೆ. ಜತೆಗೆ ಹೊಸ ಸೇತುವೆಯಲ್ಲೂ ಕಾರ್ಯಾಚರಣೆ ಮಾಡಿಸಲಾಗುತ್ತಿದೆ. ನಗರಸಭೆ ಆಸ್ತಿ ರಕ್ಷಣೆ ಮತ್ತು ನಗರದ ಶುಚಿತ್ವಕ್ಕೆ ಒತ್ತು ನೀಡುವುದು ನಮ್ಮ ಕರ್ತವ್ಯ.ಡಾ. ಜಯಣ್ಣ ಆಯುಕ್ತರು, ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net