

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ನಿಮಿತ್ತ ವಿವಿಧ ಸಂಘ ಸಂಸ್ಥೆಗಳು, ಎಲ್ಲ ಜಾತಿ, ಧರ್ಮದವರು ಕೂಡಿಕೊಂಡು ನಗರದಲ್ಲಿ ಏ.೪ರಂದು ಬೆಳಗ್ಗೆ ೭ಕ್ಕೆ ಬೃಹತ್ ಅರಿವಿನ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಬಿ.ಆರ್.ಅಂಬೇಡ್ಕರ್ ಇಂಟಿಗ್ರೇಟೆಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಡಾ.ಸುನೀಲಕುಮಾರ ವಂಟಿ ತಿಳಿಸಿದರು. ಸಂವಿಧಾನ, ಅಂಬೇಡ್ಕರ್ ಜೀವನಾದರ್ಶಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ೭ಕ್ಕೆ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿವರೆಗೆ ಜಾಥಾ ಸಾಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಸಾನ್ನಿಧ್ಯ ವಹಿಸಲಿದ್ದು, ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ವಿವಿಧ ಧರ್ಮಗಳ ಪೂಜ್ಯರು, ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರು ಸೇರಿ ಐದಾರು ನೂರು ಜನರು ಪಾಲ್ಗೊಳ್ಳಲಿದ್ದಾರೆ ಎಂದರು. ಪ್ರಮುಖರಾದ ಕೈಲಾಸನಾಥ ದಿಕ್ಷೀತ್, ಎಚ್.ಬಿ.ಪಾಟೀಲ್, ರಜಾಕ್ ಪಟೇಲ್, ಗುರುನಾಥ ಪೂಜಾರಿ, ಸಿದ್ದರಾಮ ತಳವಾರ, ಈರಣ್ಣ ಹಡಪದ ಇತರರಿದ್ದರು.