

ವಿಜಯವಾಣಿ ಸುದ್ದಿಜಾಲ ಶಿರಸಿ:
ಅರಣ್ಯ ಹಕ್ಕು ಕಾಯ್ದೆಯನ್ನು ಸರಿಯಾಗಿ ಜಾರಿಮಾಡದೆ ಅರಣ್ಯ ಅತಿಕ್ರಮಣದಾರರಿಗೆ ಮರಣಶಾಸನ ಬರೆದಿರುವ ರಾಜ್ಯ ಸರ್ಕಾರದ ನಡೆ ನಾಚಿಗೆಗೇಡಿನ ಸಂಗತಿಯಾಗಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಹೇಳಿದರು.
ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ವತಿಯಿಂದ ಆಯೋಜಿಸಿದ್ದ ಅರಣ್ಯವಾಸಿಗಳ ಉಳಿಸಿ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿ ಮಾಡದೆ ಅರಣ್ಯವಾಸಿಗಳಿಗೆ ಸರ್ಕಾರವು ಕಿರುಕುಳ ನೀಡುತ್ತಿದೆ. ದಾಖಲೆಗಳ ಹೆಸರಲ್ಲಿ ಅರ್ಜಿಗಳ ತಿರಸ್ಕಾರ ಮಾಡುತ್ತಿದೆ. ರಾಜ್ಯ ಸರ್ಕಾರದ ಈ ನಡೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಏಕಾಏಕಿ ಅರಣ್ಯವಾಸಿಗಳ ಅರ್ಜಿ ತಿರಸ್ಕರಿಸುವುದು ಅಮಾನವೀಯ ಎಂದ ಅವರು, ಸಾಂಘಿಕ ಹೋರಾಟದ ಮೂಲಕ ಗೆಲುವು ಪಡೆಯಬೇಕು. ಕೋರ್ಟ್ ಒಳಗೆ ಹಾಗೂ ಹೊರಗೆ ಹೋರಾಟ ಮಾಡಬೇಕು ಎಂದು ಹೇಳಿದರು. ಅರಣ್ಯವಾಸಿಗಳು ಕಾನೂನಿನ ಜ್ಞಾನ ಪಡೆಯಬೇಕು. ಹಾಗಾದರೆ ಮಾತ್ರ ಹಕ್ಕು ಪಡೆಯಲು ಸಾಧ್ಯವಿದೆ. ಅರಣ್ಯವಾಸಿಗಳ ಹಕ್ಕು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಶಾಸಕ ಎಚ್.ಕೆ.ಪಾಟೀಲ ಮಾತನಾಡಿ, ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ನೀಡಲು ಹೊಸ ಕಾನೂನನ ಅಗತ್ಯವಿಲ್ಲ. ಕಾನೂನು ಅನುಷ್ಠನ ಮಾಡಬೇಕಿರುವವರು ಕಾನೂನು ರೀತಿ ನಡೆದುಕೊಂಡರೆ ಸಾಕು ಎಂದರು. ವಿಚಾರಣೆ ಇಲ್ಲದೆ ಅರಣ್ಯ ಅತಿಕ್ರಮಣದಾರರ ಅರ್ಜಿ ತಿರಸ್ಕರಿಸುವ, ಜನದ್ರೋಹಿ ಆದೇಶ ನೀಡುವ ಅಧಿಕಾರಿಗಳ ಬಗ್ಗೆ ತನಿಖೆ ಆಗಬೇಕು. ಸೂಕ್ತ ಶಿಕ್ಷೆ ನೀಡಬೇಕು ಎಂದ ಅವರು, ಅರಣ್ಯವಾಸಿಗಳಿಗೆ ಹಕ್ಕು ನೀಡಲು ರಾಜಕೀಯ ಇಚ್ಛಾಶಕ್ತಿ ಬೇಕು. ಅಂಥವರಿಗೆ ಮಾತ್ರ ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದರು.
ಅರಣ್ಯಭೂಮಿ ಹಕ್ಕು ಹೋರಾಟಗಾರರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ಕರ್ನಾಟಕ ೧೬ನೇ ಸ್ಥಾನದಲ್ಲಿದೆ. ಇದು ನಾಚಿಗೆಗೇಡಿನ ಸಮನಗತಿಯಾಗಿದೆ. ಸಾವಿರಾರು ಹೋರಾಟಗಳ ನಡುವೆಯೂ ಅರಣ್ಯವಾಸಿಗಳು ಅತಂತ್ರವಾಗಿದ್ದಾರೆ ಎಂದರೆ ಜನಪ್ರತಿನಿದಿಗಳ ಇಚ್ಛಾಶಕ್ತಿಯ ಕೊರತೆಯೇ ಮುಖ್ಯ ಕಾರಣ. ಯಾವ ಕಾನೂನಿನಲ್ಲಿಯೂ ಮೂರು ತಲೆಮಾರಿನ ದಾಖಲಾತಿ ಇರಬೇಕೆಂಬುದು ಇಲ್ಲದಿದ್ದರೂ ಆ ಕಾರಣ ನೀಡಿ ಸಾವಿರಾರು ಅರ್ಜಿ ತಿರಸ್ಕರಿಸಲಾಗಿದೆ. ಯಾವ ಆಧಾರದ ಮೇಲೆ ತಿರಸ್ಕರಿಸಲಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.
ಜಿಪಿಎಸ್ ಮಾಡುವಲ್ಲಿ ಅನ್ಯಾಯ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಪರವಾಗಿ ಸುಪ್ರಿಂ ಕೋರ್ಟ್ ನಲ್ಲಿ ಅಫೀಡವಿಟ್ ಸಲ್ಲಸಲು ಬೆಳಗಾವಿ ಅಧಿವೇಶನದಲ್ಲಿ ತೀರ್ಮಾನಿಸಬೇಕು. ರಾಜ್ಯದಲ್ಲಿ ೨.೯೮ ಲಕ್ಷ ಅರ್ಜಿಗಳಲ್ಲಿ ೨.೪೦ ಲಕ್ಷ ಅರ್ಜಿ ತಿರಸ್ಕಾರವಾಗಿದೆ. ಈ ಮಧ್ಯ ಸುಪ್ರಿಂ ತೀರ್ಪು ಅರಣ್ಯ ಅತಿಕ್ರಮಣದಾರರ ವಿರುದ್ಧವಾದರೆ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಜನರ ಕಣ್ಣು ಕಟ್ಟುವ ಕಾರ್ಯವಾಗುತ್ತಿದೆ. ಅರಣ್ಯ ತಿದ್ದುಪಡಿ ಪ್ರಮಾಣಪತ್ರ ಸುಪ್ರೀಂ ಕೋರ್ಟ್ ಗೆ ಹಾಕಿ. ಇಲ್ಲದಿದ್ದರೆ ಎಲ್ಲ ಶಾಸಕರ ಮನೆ ಎದುರು ಪ್ರತಿಭಟನೆ ಮಾಡಲಾಗುವುದು ಎಂದರು.
ವೇದಿಕೆಯಲ್ಲಿ ತಂಜೀಮ್ ಸಂಸ್ಥೆ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಸಂಘಟನೆ ಪ್ರಮುಖರಾದ ವಸಂತ ನಾಯ್ಕ, ಸಿ.ಎಫ್.ನಾಯ್ಕ, ಚಿದಾನಂದ ಹರಿಜನ, ಭೀಮ್ಸಿ ವಾಲ್ಮೀಕಿ, ನೆಹರೂ ನಾಯ್ಕ ಇತರರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಮಾರಿಕಾಂಬಾ ದೇವಾಲಯದ ಎದುರಿನಿಂದ ಬೃಹತ್ ಮೆರವಣಿಗೆ ನಗರದಾದ್ಯಂತ ನಡೆಯಿತು. ಅಂದಾಜು ೫ ಸಾವಿರ ಜನರು ಮೆರವಣಿಗೆಯುದ್ಧಕ್ಕೂ ಸಾಗಿದರು.