ಅರಣ್ಯವಾಸಿಗಳಿಗೆ ಆಹಾರ ತಲುಪಿಸಿ

10SIRSI1
Published on

ಶಿರಸಿ: ಕರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯ ಮತ್ತು ಸಿಂಹಧಾಮಗಳಲ್ಲಿ ಅರಣ್ಯವಾಸಿ ಗ್ರಾಮಸ್ಥರ ಚಲನವಲನಗಳನ್ನು ನಿಯಂತ್ರಿಸಿರುವ ಸರ್ಕಾರವು ಅರಣ್ಯವಾಸಿಗಳಿಗೆ ಆಹಾರ, ವೈದ್ಯಕೀಯ ವ್ಯವಸ್ಥೆಗಳನ್ನು ಅವರ ಮನೆಗಳಿಗೆ ತಲುಪಿಸುವಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ. ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಮಾಲಿನ್ಯ ಇಲಾಖೆಯು ಮಾನವನಿಂದ ವನ್ಯ ಪ್ರಾಣಿಗಳಿಗೆ ಕರೊನಾ ವೈರಸ್ ಹಬ್ಬುವ ಆತಂಕದ ಹಿನ್ನೆಲೆಯಲ್ಲಿ ಹಾಗೂ ನ್ಯೂಯಾರ್ಕನಲ್ಲಿ ಹುಲಿಗೆ ವೈರಸ್ ಹಬ್ಬಿರುವ ಹಿನ್ನೆಲೆಯಲ್ಲಿ ಏ.6ರಂದು ಅರಣ್ಯವಾಸಿ ಗ್ರಾಮಸ್ಥರ ಚಲನವಲನಗಳನ್ನು ನಿಯಂತ್ರಿಸಿ ರುವ ಸರ್ಕಾರವು ಆರೋಗ್ಯ ಸೂಚಿಯನ್ನು ಪ್ರಕಟಿಸಿದೆ. ಈ ಆದೇಶದಿಂದ ಕರ್ನಾಟಕದ 5 ರಾಷ್ಟ್ರೀಯ ಉದ್ಯಾನವನ, ಬಂಡಿಪುರ, ನಾಗರಹೊಳೆ, ಕುದುರೆಮುಖ, ಬನ್ನೇರುಘಟ್ಟ, ಅಣಶಿ ಸೇರಿ 21 ವಿವಿಧ ವನ್ಯಜೀವಿ ಅಭಯಾರಣ್ಯಗಳಲ್ಲಿ ದಾಂಡೇಲಿ, ಶರಾವತಿ, ಕಾಳಿ, ರಂಗನತಿಟ್ಟು, ಭದ್ರ, ಬ್ರಹ್ಮಾಗಿರಿ ಮುಂತಾದ ಅರಣ್ಯ ಪ್ರದೇಶದಲ್ಲಿ ಸಹಸ್ರಾರು ಸಂಖ್ಯೆಯ ಅರಣ್ಯ ವಾಸಿಗಳು ವಾಸ್ತವ್ಯ ಮಾಡಿಕೊಂಡು ಅರಣ್ಯ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಅವಲಂಬಿತವಾಗಿರುವ ಕುಟುಂಬಗಳಿಗೆ ತೊಂದರೆ ಆಗಿದೆ. ಹೀಗಾಗಿ ಮೀಸಲು ಅರಣ್ಯ ಕ್ಷೇತ್ರದಲ್ಲಿ ಹೊರಗಿನವರಿಗೆ ಮತ್ತು ಅಪರಿಚಿತರಿಗೆ ಪ್ರವೇಶಿಸಲು ಅವಕಾಶ ನೀಡದೇ ಅರಣ್ಯ ವಾಸಿಗಳಿಗೆ ವಿಶೇಷವಾದ ಆರೋಗ್ಯದ ಕುರಿತು ಹೆಚ್ಚಿನ ಮುತುವರ್ಜಿ ವಹಿಸುವಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅರಣ್ಯ ವಾಸಿಗಳ ವ್ಯವಸ್ಥೆಗೆ ಆಗ್ರಹ: ದಾಂಡೇಲಿ ವನ್ಯಜೀವಿ ಧಾಮ, ಅಣಶಿ ರಾಷ್ಟ್ರೀಯ ಉದ್ಯಾನವನ, ಕಾಳಿ ಹುಲಿಧಾಮ ಕೇಂದ್ರ ಸರ್ಕಾರದ ಉದ್ದೇಶ ಹಾಗೂ ಜಾರಿ ಪೂರ್ಣ ಪ್ರಮಾಣದಲ್ಲಿ ಆಗಬೇಕಾದಲ್ಲಿ ಈ ಕ್ಷೇತ್ರದಲ್ಲಿರುವ ಅರಣ್ಯ ವಾಸಿಗಳಿಗೆ ವಾಸ್ತವ್ಯದ ಕ್ಷೇತ್ರಕ್ಕೆ ಆಹಾರ ಸಾಮಗ್ರಿ ಮತ್ತು ವೈದ್ಯಕೀಯ ತಪಾಸಣೆ ವ್ಯವಸ್ಥೆ ಮಾಡುವ ದಿಸೆಯಲ್ಲಿ ಕ್ರಿಯಾಯೋಜನೆ ಜಾರಿಗೆ ತಂದು ನಂತರ ಕೇಂದ್ರ ಸರ್ಕಾರದ ಅದೇಶವನ್ನು ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಜೀವನಕ್ಕಾಗಿ ಆರೋಗ್ಯ ರಕ್ಷಣೆಗಾಗಿ ಅರಣ್ಯ ವಾಸಿಗಳು ವನ್ಯಜೀವಿಗಳ ಮೇಲೆ ಹಸ್ತಕ್ಷೇಪ ಆಗುವುದಲ್ಲದೇ ಅರಣ್ಯ ಪ್ರದೇಶದಲ್ಲಿ ಸಂಚರಿಸುವುದು ಅರಣ್ಯ ವಾಸಿಗಳಿಗೆ ಅನಿವಾರ್ಯ ಆಗುವುದೆಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net