ಅರಣ್ಯ ಸಿಬ್ಬಂದಿಗೆ ಸ್ವಯಂ ಚಿಕಿತ್ಸೆ ತರಬೇತಿ

02-FEB-GPT-1
Published on

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವನ್ಯಜೀವಿ ವಲಯದ ಸಿಬ್ಬಂದಿಗೆ ಶನಿವಾರ ಮಂಗಳೂರು ಕಸ್ತೂರಬಾ ವೈದ್ಯಕೀಯ ಕಾಲೇಜಿನ ವೈದ್ಯರಿಂದ ತುರ್ತು ಸಂದರ್ಭದಲ್ಲಿ ಸ್ವಯಂ ಚಿಕಿತ್ಸೆ ಪಡೆದುಕೊಳ್ಳುವ ಬಗ್ಗೆ ತರಬೇತಿ ನೀಡಲಾಯಿತು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಓಂಕಾರ ವನ್ಯಜೀವಿ ವಲಯದಲ್ಲಿಯೇ ಹೆಚ್ಚಿನ ಅತಿ ಹೆಚ್ಚು ವನ್ಯಜೀವಿ- ಮಾನವ ಸಂಘರ್ಷ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ವಲಯದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ತುರ್ತು ಪರಿಸ್ಥಿತಿಗಳಲ್ಲಿ ಪ್ರಥಮ ಚಿಕಿತ್ಸೆ ಮಾಡುವ ಬಗ್ಗೆ ಕಸ್ತೂರಬಾ ವೈದ್ಯಕೀಯ ಕಾಲೇಜಿನ ವೈದ್ಯ ಡಾ.ನಿಖಿಲ್ ಪೌಲ್ ತರಬೇತಿ ನೀಡಿದರು.

ಅರಣ್ಯ ಪ್ರದೇಶದೊಳಗೆ ಗಸ್ತು ನಡೆಸುವ ಸಿಬ್ಬಂದಿ ತಮ್ಮ ಕರ್ತವ್ಯದ ಸಂದರ್ಭದಲ್ಲಿ ಉಂಟಾಗಬಹುದಾದ ಹೃದಯದ ಸಮಸ್ಯೆ, ಆಕಸ್ಮಿಕವಾಗಿ ಗಾಯಗೊಂಡರೆ ಉಂಟಾಗುವ ತೀವ್ರವಾದ ರಕ್ತ ಸೋರುವಿಕೆ, ಮೂಳೆ ಮುರಿತ ಸಂದರ್ಭಗಳಲ್ಲಿ ಹಾಗೂ ಹಾವು ಮತ್ತು ಇತರ ವಿಷ ಜಂತುಗಳ ಕಡಿತದ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಮಾಡಿಕೊಳ್ಳುವುದರ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

ಇದೇ ಸಂದರ್ಭದಲ್ಲಿ ಸ್ವಯಂಸೇವಾ ಸಂಸ್ಥೆಗಳ ವತಿಯಿಂದ ಸಿಬ್ಬಂದಿಗೆ ಪಾದರಕ್ಷೆ, ಟೋಪಿಗಳು ಹಾಗೂ ಬ್ಯಾಗುಗಳನ್ನು ವಿತರಿಸಲಾಯಿತು.

ವಲಯಾರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್, ಸ್ವಯಂಸೇವಾ ಸಂಸ್ಥೆಯ ಪವನ್ ಜೋಷಿ, ಕೇರಳ ರಾಜ್ಯದ ವೈದ್ಯಕೀಯ ಸೇವೆ ಇಎನ್‌ಟಿ ವಿಭಾಗದ ಡಾ.ಶಂಶೀರ್, ಮಂಗಳೂರಿನ ಸಂತ ಅಲೋಶಿಯಸ್ ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ್ ವಟಿ, ಹಿಮಗಿರಿ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಆರ್.ರಘುರಾಮ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net