ಅರಣ್ಯ ಸಂರಕ್ಷಣೆ ಸವಾಲಿನ ಕೆಲಸ

12-SEP-GPT-2A
Published on

ಗುಂಡ್ಲುಪೇಟೆ: ಅರಣ್ಯ ಸಂರಕ್ಷಣೆಯಲ್ಲಿ ಸಿಬ್ಬಂದಿ ತಮ್ಮ ಜೀವವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಂಡೀಪುರ ಹುಲಿಯೋಜನೆ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್ ಹೇಳಿದರು.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಬಂಡೀಪುರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳು ಕಾಡಿನಿಂದ ಹೊರಬರುತ್ತಿರುವುದರಿಂದ ಎಲ್ಲ ಕೆಲಸಗಳಿಗಿಂತ ಅರಣ್ಯ ಇಲಾಖೆ ಕೆಲಸ ತುಂಬ ಸವಾಲಿನದಾಗಿದೆ. ಸಾವು ನಮ್ಮ ಬೆನ್ನ ಹಿಂದಿದೆ ಎಂದು ಗೊತ್ತಿದ್ದರೂ ಅರಣ್ಯ ಸಿಬ್ಬಂದಿ ಪ್ರತಿ ದಿನವೂ ಕಾಡು ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡು ಕರ್ತವ್ಯದ ಸಂದರ್ಭದಲ್ಲಿ ಹುತಾತ್ಮರಾಗುತ್ತಿದ್ದಾರೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಎಲ್ಲ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಹೆಡಿಯಾಲ ಅರಣ್ಯದಲ್ಲಿ ಆನೆ ತುಳಿತದಿಂದ ಸಾವಿಗೀಡಾದ ವಾಚರ್ ಲೋಕೇಶ್ ಸೇರಿದಂತೆ ಅರಣ್ಯ ಸಂರಕ್ಷಣೆ ಸಂದರ್ಭದಲ್ಲಿ ಹುತಾತ್ಮರಾದ 7 ಸಿಬ್ಬಂದಿ ಕುಟುಂಬಕ್ಕೆ ತಲಾ 10 ಸಾವಿರ ರೂ. ನಗದು ವಿತರಣೆ ಮಾಡಲಾಯಿತು. ಹೆಡಿಯಾಲ ಉಪವಿಭಾಗದ ಎಸಿಎಫ್ ಸತೀಶ್, ಗುಂಡ್ಲುಪೇಟೆಯ ಸುರೇಶ್, ಆರ್‌ಎಫ್‌ಒಗಳಾದ ಎನ್.ಸಿ.ಮಹದೇವ, ಬಿ.ಎಂ.ಮಲ್ಲೇಶ್, ಅಮೃತೇಶ್, ಪುನೀತ್‌ಕುಮಾರ್, ನಿಸಾರ್ ಅಹಮದ್, ಹನುಮಂತಪ್ಪ ಪಾಟೀಲ್, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net