

ಹನೂರು: ಕಾಡಂಚಿನಲ್ಲಿರುವ ಪಾರಂಪರಿಕ ಅರಣ್ಯ ವಾಸಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಎಚ್ಚರಿಸಿದರು.
ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಿಕೋಟೆ, ಹೊಗೇನಕಲ್ ಫಾಲ್ಸ್ ಹಾಗೂ ಜಂಬುಕಪಟ್ಟಿಯಲ್ಲಿ ಬುಧವಾರ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು. ಈ ಭಾಗದ ಅರಣ್ಯ ಪ್ರದೇಶದ ಅಂಚಿನ ಗ್ರಾಮಗಳಲ್ಲಿ ಜನರಿಗೆ ಸಮರ್ಪಕ ಕುಡಿಯುವ ನೀರು, ರಸ್ತೆ, ವಿದ್ಯುತ್ ಹಾಗೂ ಅಗತ್ಯ ಮೂಲಸೌಕರ್ಯವಿಲ್ಲ. ಇದರಿಂದ ಇಲ್ಲಿನ ಜನರು ಕಷ್ಟದ ನಡುವೆ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಮೂಲಸೌಕರ್ಯವನ್ನು ಒದಗಿಸಿಕೊಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ಇನ್ನು ಗೋಪಿನಾಥಂ ಆಸ್ಪತ್ರೆ ಇಲ್ಲದ ಪರಿಣಾಮ ತುರ್ತು ಚಿಕಿತ್ಸೆ ಪಡೆಯಬೇಕಾದರೆ ತಮಿಳುನಾಡು ಅಥವಾ ಮಹದೇಶ್ವರ ಬೆಟ್ಟಕ್ಕೆ ತೆರಳಬೇಕಿದೆ. ಈ ದಿಸೆಯಲ್ಲಿ ರೈತ ಸಂಘವನ್ನು ಆರಂಭಿಸಿದ್ದು, ಪ್ರತಿಯೊಬ್ಬರೂ ಸಂಘಟಿತರಾಗುವುದರ ಮೂಲಕ ಮೂಲಸೌಕರ್ಯವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮ.ಬೆಟ್ಟಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಉಪಾಧ್ಯಕ್ಷ ಪಳನಿಸ್ವಾಮಿ, ಗೌರವಾಧ್ಯಕ್ಷ ರಾಜಣ್ಣ, ರೈತ ಮುಖಂಡರಾದ ಕೂಡಲೂರು ವೆಂಕಟೇಶ್, ಚಿನ್ನರಾಜು, ಬಾಲರಾಜು, ಗೋವಿಂದರಾಜು, ರತ್ನವೇಲು, ರೂಪಾ, ಚೆಲುವಿ, ಅಮೋದಾ, ಚಿನ್ನಪೊಣ್ಣು ಇದ್ದರು.