ಅರಣ್ಯ ಇಲಾಖೆ ಸಿಬ್ಬಂದಿಗೆ ಬಿಟಿ ಮುಟ್ಟಿಸಿದ ಗ್ರಾಮಸ್ಥರು

09-SEP-GPT-3
Published on

ಗುಂಡ್ಲುಪೇಟೆ: ಹುಲಿ ಸೆರೆ ಕಾರ್ಯಾಚರಣೆ ಮಾಹಿತಿ ಕೇಳಿದಕ್ಕೆ ಸಾರ್ವಜನಿಕರ ಮೇಲೆ ದರ್ಪ ತೋರಲು ಮುಂದಾದ ಅರಣ್ಯ ಸಿಬ್ಬಂದಿಯನ್ನು ಬೊಮ್ಮಲಾಪುರ ಗ್ರಾಮಸ್ಥರು ಬೋನಿನೊಳಗೆ ಕೂಡಿ ಹಾಕಿದರು. ಎಸಿಎಫ್ ಮನವೊಲಿಸಿದ ಬಳಿಕ ಬಿಡುಗಡೆ ಮಾಡಿದರು.

ಮಂಗಳವಾರ ಬೆಳಗ್ಗೆ ಅರಣ್ಯ ಇಲಾಖೆ ವಾಹನವನ್ನು ಕಂಡ ರೈತರು ಹುಲಿ ಕಾಣಿಸಿಕೊಂಡ ಸ್ಥಳದ ಬಗ್ಗೆ ಮಾಹಿತಿ ನೀಡಲು ಅಡ್ಡಗಟ್ಟಿದ್ದಾರೆ. ಚಾಲಕ ಜೀಪ್ ನಿಲ್ಲಿಸದೆ ಸ್ಥಳೀಯರ ಮೇಲೆ ನುಗ್ಗಿಸಲು ಮುಂದಾಗಿದ್ದರಿಂದ ಸ್ಥಳೀಯರು ಆಕ್ರೋಶಗೊಂಡರು. ಬೋನಿನಲ್ಲಿ ಕರು ಸತ್ತಿರುವುದನ್ನು ನೋಡಲು ಹೋದ ಸಿಬ್ಬಂದಿಯನ್ನು ಸುತ್ತುವರಿದ ಗ್ರಾಮಸ್ಥರು ಬೋನಿನೊಳಗೆ ಅವರನ್ನು ಕೂಡಿಹಾಕಿ ದಿಗ್ಬಂಧನ ಹಾಕಿದರು. ಜೀಪಿನ ಚಕ್ರದ ಗಾಳಿ ಬಿಟ್ಟು ರೈತರ ಮೇಲೆ ಜೀಪು ಹತ್ತಿಸಲು ಮುಂದಾದ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಬೇಕು ಎಂದು ಪಟ್ಟುಹಿಡಿದು ಕುಳಿತರು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂಡೀಪುರ ಉಪವಿಭಾಗದ ಎಸಿಎಫ್ ಎನ್.ಪಿ.ನವೀನ್ ಕುಮಾರ್, ಗುಂಡ್ಲುಪೇಟೆ ಎಸಿಎಫ್ ಸುರೇಶ್, ಪ್ರಭಾರ ಆರ್‌ಎಫ್‌ಒ ಶಿವಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಜಯಕುಮಾರ್, ವನರಾಜು, ಸಬ್‌ಇನ್‌ಸ್ಪೆೆಕ್ಟರ್ ಮಹೇಶ್ ಆಗಮಿಸಿದರು.

ಎಸಿಎಫ್ ವಿರುದ್ಧ ಆಕ್ರೋಶ

ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ಸುರೇಶ್ ಹುಲಿ ಸೆರೆ ಕಾರ್ಯಾಚರಣೆಯನ್ನು ಗಂಭೀರವಾಗಿ ಪರಿಗಣಿಸದೆ ಭರವಸೆ ನೀಡುತ್ತಿದ್ದಾರೆ. ಇದರಿಂದ ರೈತರು ಜಮೀನುಗಳಿಗೆ ಮತ್ತು ಕಾರ್ಮಿಕರು ಕೂಲಿ ಕೆಲಸಗಳಿಗೆ ಹೋಗದಂತಾಗಿದೆ. 20 ದಿನಗಳಿಂದ ಹುಲಿ ಸೆರೆ ಕಾರ್ಯಾಚರಣೆ ಕೈಗೊಳ್ಳದೆ ನಿರ್ಲಕ್ಷೃ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸಿಎಫ್ ಎನ್.ಪಿ.ನವೀನ್‌ಕುಮಾರ್ ಮಾತನಾಡಿ, ಈಗಿನಿಂದಲೇ ಸಾಕಾನೆಗಳನ್ನು ಕರೆತಂದು ಕೂಂಬಿಂಗ್ ನಡೆಸಿ ಹುಲಿ ಸೆರೆಹಿಡಿಯಲು ಕ್ರಮಕೈಗೊಳ್ಳಲಾಗುವುದು. ನಾನೇ ಗಮನಹರಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ ಬಳಿಕ ಸಿಬ್ಬಂದಿಯನ್ನು ಬೋನಿನಿಂದ ಹೊರಗೆ ಬಿಟ್ಟರು.

ಕೆಲ ಯುವಕರು ಸಿಬ್ಬಂದಿಯನ್ನು ಬೋನಿನೊಳಗೆ ಕೂಡಿ ಹಾಕಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದು ವೈರಲ್ ಆಗಿದೆ. ಸ್ಥಳಕ್ಕೆ ಸಾಮೂಹಿಕ ನಾಯಕತ್ವದ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಭೇಟಿ ನೀಡಿದ್ದರು.

--------------

ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಗಂಭೀರ ಪ್ರಯತ್ನ ನಡೆಸಿಲ್ಲ. ಹತ್ತಾರು ಬಾರಿ ರೈತರು ದೂರು ನೀಡಿದರೂ ಅರಣ್ಯ ಇಲಾಖೆ ಕ್ಯಾಮರಾ ಅಳವಡಿಸಿ ಜನರನ್ನು ದಾರಿ ತಪ್ಪಿಸುತ್ತಿದೆ. ಹುಲಿ ಕಾಣಿಸಿಕೊಂಡ ಜಮೀನಿನ ಬಗ್ಗೆ ಮಾಹಿತಿ ನೀಡಲು ಹೋಗಿದ್ದ ಜನರ ಮೇಲೆ ಜೀಪು ಹತ್ತಿಸಲು ಮುಂದಾಗಿದ್ದರಿಂದ ರೊಚ್ಚಿಗೆದ್ದಿದ್ದಾರೆ. ತಮ್ಮ ತಪ್ಪು ಮರೆಮಾಚಲು ಗ್ರಾಮಸ್ಥರ ವಿರುದ್ಧ ದೂರು ನೀಡಲು ಮುಂದಾದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ.

ಗುಡಿಮನೆ ಅಭಿಷೇಕ್

-----------

ವಡೆಯನಪುರ ಸಮೀಪ ಕಾಣಿಸಿಕೊಳ್ಳುತ್ತಿರುವ ಹುಲಿ ಪ್ರಕರಣದಲ್ಲಿ ಸರಿಯಾಗಿ ಕರ್ತವ್ಯ ಪಾಲಿಸದ ಹಾಗೂ ಇಂದು ನಡೆದ ಘಟನೆಗೆ ಕಾರಣರಾದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಪೊಲೀಸರಿಗೆ ದೂರು ನಿಡಲಾಗುವುದು.

ಎಸ್.ಪ್ರಭಾಕರನ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ

-----------

ಐವರು ಗ್ರಾಮಸ್ಥರ ವಿರುದ್ಧ ಪೊಲೀಸರಿಗೆ ದೂರು

ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಸಮೀಪ ಗ್ರಾಮಸ್ಥರಿಂದ ಬೋನಿನೊಳಗೆ ಬಂಧಿಯಾಗಿದ್ದ ಅರಣ್ಯ ಸಿಬ್ಬಂದಿ ಐವರು ಗ್ರಾಮಸ್ಥರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಜ್ಞಾನ ಶೇಖರ್, ಕಾರ್ತಿಕ್, ಸಂತೋಷ ಹಾಗೂ ಬಸವೇಗೌಡ ಎಂಬುವರು ಮಂಗಳವಾರ ಸಂಜೆ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ರಘು ಹಾಗೂ ಇತರ ನಾಲ್ವರ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀಪುಗಳನ್ನ ಪಂಕ್ಚರ್ ಮಾಡಿ ಅಕ್ರಮ ಬಂಧನಕ್ಕೆ ಒಳಪಡಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net