ಅರಣ್ಯ ಅಭಿವೃದ್ಧಿ ಪ್ರಿಯರಿಗೆ ಇಲಾಖೆಯ ಸಹಕಾರ

bkt-10-3
Published on

ಬಾಗಲಕೋಟೆ: ಅಳಿವಿನ ಅಂಚಿನಲ್ಲಿರುವ ಅರಣ್ಯ ಪ್ರದೇಶವನ್ನು ಪುನಃಚೇತನ ಗೊಳಿಸುವುದಕ್ಕಾಗಿ ಸಂಘ ಸಂಸ್ಥೆಗಳು ಹಾಗೂ ಅರಣ್ಯ ಪ್ರಿಯರಿಗೆ ಗಿಡಮರಗಳನ್ನು ಬೆಳೆಸಲು ಅರಣ್ಯ ಇಲಾಖೆ ಸದಾ ಸಿದ್ದವಿದೆ ಎಂದು ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಶ್ರೀಧರ್ ಹೇಳಿದರು.

ಗದ್ದನಕೇರಿ ಕ್ರಾಸ್‍ನಲ್ಲಿರುವ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಸೇವಾ ಜನನಿ ಪೌಂಡೇಶನ್ ವತಿಯಿಂದ ಮಿಯಾ ಪದ್ಧತಿಯಲ್ಲಿ ಬೆಳೆಯಲಾದ ಹತ್ತು ಸಾವಿರ ಗಿಡ ಮರಗಳ ಉಸ್ತುವಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಿಯ ಪದ್ಧತಿಯ ಅರಣ್ಯ ಬೆಳೆ ಈಗಾಗಲೇ ಮಂಗಳೂರು, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರಾರಂಭಗೊಂಡಿದ್ದು, ಇಂತಹ ಪದ್ಧತಿಯನ್ನು ಪ್ರತಿಯೊಂದು ತಾಲೂಕಿಗೆ ಮಾಡುವ ಗುರಿ ಹೊಂದಲಾಗಿದೆ ಎಂದರು.

ಸಮೂಹ ಗಿಡಗಳ ಬೆಳವಣಿಗೆಗೆ ದಟ್ಟವಾಗಿ ವಿವಿಧ ರೀತಿಯ ಎತ್ತರವಾಗಿ ಬೆಳೆಯುವ ಹಣ್ಣು ಮತ್ತು ಔಷಧೀಯ ಗುಣವುಳ್ಳ 56 ಜಾತಿಯ ಗಿಡಗಳನ್ನು ಬೆಳೆಸಲಾಗುತ್ತಿದೆ. ಈಗಾಗಲೇ ಬೆಳೆಸಲಾದ ಗಿಡಗಳು ಬಹುಬೇಗನೆ ಎತ್ತರವಾಗಿವೆ. ಇವು ಇನ್ನೂ ಎತ್ತರವಾಗಿ ಮೋಡಗಳನ್ನು ಆಕರ್ಷಿಸುವುದಲ್ಲದೆ ಮನುಷ್ಯರಿಗೆ ಉಪಯುಕ್ತವಾದ ಆಮ್ಲಜನಕವನ್ನು ಹೇರಳವಾಗಿ ನೀಡುತ್ತವೆ. ಸಂಘ ಸಂಸ್ಥೆಗಳು ಹಾಗೂ ಎನ್.ಜಿ.ಒಗಳು ಗಿಡಮರಗಳ ಬೆಳೆಸಲು ಮುಂದಾದರೆ ಇದೇ ಪದ್ಧತಿಯ ಇಲ್ಲಿಯೇ ಎರಡು ಎಕರೆ ಪ್ರದೇಶವು ಕೂಡ ಬೆಳೆಸುವ ಸಂಕಲ್ಪವಿದೆ. ರೈತರು ತಮ್ಮ ಜಮೀನಿನಲ್ಲಿ ಇಂತಹ ಗಿಡಮರಗಳನ್ನು ಬೆಳೆಸಬೇಕಾದರೆ ಅವರಿಗೆ ಉಚಿತವಾಗಿ ಸಸಿ ನೀಡಿ ಸಂರಕ್ಷಣೆಗೆ ಮಾರ್ಗದರ್ಶನ ನೀಡಲು ಇಲಾಖೆ ಸಂಪೂರ್ಣ ಸನ್ನದ್ದವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸೇವಾ ಜನನಿ ಫೌಂಡೇಶನ್‍ದ ಅಧ್ಯಕ್ಷ ಜಗದೀಶ್ ಅಮಾತೆಪ್ಪ ಗೌಡರ್, ಮಹಿಪತಿ ದೇಸಾಯಿ, ಸಿದ್ದಾರ್ಥ ಬಂಗಾರ, ರೋಹಿತ್ ಜೋಶಿ, ಚೆನ್ನಬಸವ ವೆಂಕಂಚಿ, ರಾಮಸ್ವಾಮಿ ವೆಂಕಟೇಶ್ ರಂಗಣ್ಣವರ್, ಕೃಷ್ಣ ಸಂಶಿ, ಅರ್ಜಿ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net