

ಅರಕಲಗೂಡು: ತಾಲೂಕಿನಲ್ಲಿ ಗುರುವಾರ ಮುಂಗಾರು ಬಿರುಸು ಪಡೆದುಕೊಂಡಿದ್ದು, ಸೋನೆ ಜತೆಗೆ ಆಗಾಗ್ಗೆ ಜಡಿ ಮಳೆ ಸುರಿಯಿತು.
ಪಟ್ಟಣದಲ್ಲಿ ಜಿಟಿ ಜಿಟಿ ಮಳೆಗೆ ಬೀದಿ ವ್ಯಾಪಾರಿಗಳು ಸಮಸ್ಯೆ ಎದುರಿಸಿದರು. ಮಾರುಕಟ್ಟೆಯಲ್ಲಿ ಜನರು ಕಿರಿಕಿರಿ ಅನುಭವಿಸಿದರೆ ವ್ಯಾಪಾರಸ್ಥರು ದಿನವಿಡೀ ಕೊಡೆ ಹಿಡಿದೇ ವ್ಯಾಪಾರ ನಡೆಸಿದರು. ಮನೆಯಿಂದ ಹೊರಬರಲು ಜನರು ಕೊಡೆಗಳ ಮೊರೆ ಹೋದರು.
ಬೆಳೆಗಳಿಗೆ ವರದಾನ: ತಾಲೂಕಿನಲ್ಲಿ ಸುರಿದ ವ್ಯಾಪಕ ಮಳೆಗೆ ಒಣಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ಬಂದಂತಾಗಿದೆ. ಕೆಲ ದಿನಗಳಿಂದ ಬೀಳುತ್ತಿದ್ದ ತುಂತುರು ಮಳೆ ರೈತರಲ್ಲಿ ನಿರಾಸೆ ಮೂಡಿಸಿತ್ತು. ಇಂದು ಬೆಳಗ್ಗೆಯಿಂದಲೇ ಜಡಿ ಮಳೆ ಬೀಳುತ್ತಿದ್ದು, ಬಿಸಿಲಿಗೆ ಬಾಡಿದ್ದ ಬೆಳೆಗಳು ಚೇತರಿಕೆ ಕಾಣಲಾರಂಭಿಸಿವೆ. ಪ್ರಮುಖ ವಾಣಿಜ್ಯ ಬೆಳೆಗಳಾದ ತಂಬಾಕು, ಆಲೂಗಡ್ಡೆ, ಶುಂಠಿ, ಮುಸುಕಿನ ಜೋಳದ ಬೆಳೆಗಳು ದೀರ್ಘಕಾಲದ ಮಳೆಯಿಲ್ಲದೆ ಬಹುತೇಕ ಒಣಗಲಾರಂಭಿಸಿದ್ದವು. ತಂಬಾಕು ಇಳುವರಿ ಕುಂಠಿತಗೊಂಡು ನಷ್ಟಕ್ಕೊಳಗಾಗುವ ಆತಂಕ ಕಾಡಿತ್ತು. ಇಂದು ಎಡೆಬಿಡದೆ ಬೀಳುತ್ತಿರುವ ಮಳೆಗೆ ಬೆಳೆಗಳು ಹಸನುಗೊಳ್ಳುವ ಆಶಾಭಾವನೆ ರೈತರಲ್ಲಿ ಮೂಡಿದೆ.
ಈ ವೇಳೆಗೆ ಒಂದೆರಡು ಬಾರಿ ಮಳೆಯಾಗಿದ್ದರೆ ಬಹುತೇಕ ಭಾಗದಲ್ಲಿ ತಂಬಾಕು ಗಿಡಗಳು ಕಟಾವಿನ ಹಂತಕ್ಕೆ ಬೆಳೆಯುತ್ತಿದ್ದವು. ಮುಂಗಾರು ತಡವಾದ ಕಾರಣ ಬೆಳೆ ಬೆಳವಣಿಗೆಗೆ ಹೊಡೆತ ಬಿದ್ದಿತು. ಇದೀಗ ಬೀಳುತ್ತಿರುವ ಮಳೆಗೆ ಅಲ್ಪಸ್ವಲ್ಪ ಫಸಲು ಕೈಸೇರಲಿದೆ ಎನ್ನುತ್ತಾರೆ ರೈತರು.
ಕೃಷಿ ಚಟುವಟಿಕೆ ಚುರುಕು: ವರ್ಷಧಾರೆಗೆ ಹರ್ಷಗೊಂಡ ರೈತರು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ಮುಸುಕಿನ ಜೋಳ, ಆಲೂಗಡ್ಡೆ ಮತ್ತಿತರ ದ್ವಿದಳ ಧಾನ್ಯ ಬೆಳೆಗಳ ಬಿತ್ತನೆ ಕಾರ್ಯ ನಡೆಸಲು ಮಳೆ ಅನುಕೂಲಕರವಾಗಿದೆ.
ಕೊಡಗಿನಲ್ಲಿ ಬೀಳುತ್ತಿರುವ ಮಳೆಯಿಂದ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಡ್ಯಾಂನಲ್ಲಿ ನೀರು ಹೊರ ಬಿಟ್ಟಿರುವುದರಿಂದ ಕಾವೇರಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ.