ಅರಕಲಗೂಡಲ್ಲಿ ಕಾಂಗ್ರೆಸ್ ಸಂಘಟನೆಗೆ ಆದ್ಯತೆ

17ark1
Published on

ಅರಕಲಗೂಡು: ವಿಧಾನಸಭಾ ಚುನಾವಣೆಯಲ್ಲಿನ ಸೋಲಿಗೆ ಧೃತಿಗೆಡದೆ ಪಕ್ಷ ಸಂಘಟನೆಗೆ ಹೆಚ್ಚು ಆದ್ಯತೆ ನೀಡಲಾಗುವುದು. ಕಾರ್ಯಕರ್ತರು ಎಂದಿನಂತೆ ಸಹಕರಿಸಬೇಕು ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಚ್.ಪಿ.ಶ್ರೀಧರ್‌ಗೌಡ ಮನವಿ ಮಾಡಿದರು.


ಪಟ್ಟಣದ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪರ ಒಲವು ಇದ್ದರೂ ಹಲವಾರು ಕಾರಣಾಂತರಗಳಿಂದ ಪಕ್ಷ ಸೋಲು ಕಾಣಬೇಕಾಯಿತು ಎಂದರು.


ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಯಿತು. ಇದು ನನಗೆ ಅತ್ಯಂತ ನೋವುಂಟು ಮಾಡಿದ್ದು, ಮತದಾರರ ತೀರ್ಪಿಗೆ ತಲೆಬಾಗುತ್ತೇನೆ. ಸೋಲಿನಿಂದ ಕಾರ್ಯಕರ್ತರು ಹತಾಶರಾಗುವ ಅಗತ್ಯವಿಲ್ಲ. ಒಗ್ಗಟ್ಟಿನಿಂದ ಪಕ್ಷವನ್ನು ಸಂಘಟಿಸಿ ಇನ್ನಷ್ಟು ಗಟ್ಟಿಗೊಳಿಸುವ ಮೂಲಕ ಮುಂದಿನ ಚುನಾವಣೆಗಳಿಗೆ ಸಜ್ಜುಗೊಳ್ಳಬೇಕಿದೆ ಎಂದು ಹೇಳಿದರು.


ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ನಮಗೆ ಇನ್ನಷ್ಟು ಬಲತಂದಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಹಾಗೂ ಅಗತ್ಯ ಅನುದಾನವನ್ನು ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಇದಕ್ಕೆ ಕಾರ್ಯಕರ್ತರು ಹಾಗೂ ಮುಖಂಡರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.


ಚುನಾವಣೆಯಲ್ಲಿ ಪಕ್ಷದ ಹಲವು ಮುಖಂಡರು ಮತ್ತು ಪದಾಧಿಕಾರಿಗಳು ಪಕ್ಷದ ವಿರುದ್ಧ ಕೆಲಸ ಮಾಡಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳುಬೇಕು ಎಂಬ ಕಾರ್ಯಕರ್ತರ ಒಕ್ಕೊರಲಿನ ಆಗ್ರಹಕ್ಕೆ ಉತ್ತರಿಸಿದ ಶ್ರೀಧರ್, ಕೆಪಿಸಿಸಿ ಇಲ್ಲಿನ ಬೆಳವಣಿಗೆಗಳನ್ನು ಗಮನಿಸಿದ್ದು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.


ಕೆಪಿಸಿಸಿ ಸದಸ್ಯ ಎಚ್.ಟಿ. ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷರಾದ ಎಚ್.ಪಿ. ಶ್ರೀನಿವಾಸ್, ಕೆ.ವಿ. ವೀರಣ್ಣ, ಪ್ರಧಾನ ಕಾರ್ಯದರ್ಶಿ ಪುಷ್ಬಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಸುಭಾನ್ ಷರೀಪ್, ಅಬ್ದುಲ್ ಬಾಸಿದ್, ಮುಖಂಡರಾದ ಚಂದೀಗೌಡ, ಸುರೇಶ್, ಪುಟ್ಟಯ್ಯ, ಗಣಪತಿ, ನಾಗರಾಜ್ , ಸಲೀಂ ಅಹಮದ್, ಚಾಂದ್ ಪಾಷ, ಹೇಮಂತ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net