

ಭಟ್ಕಳ: ತಾಲೂಕಿನ ಚಿತ್ರಾಪುರ ಶಿರಾಲಿಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ 26ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ, ದೀಪೋತ್ಸವ, ಮಹಾ ಅನ್ನಸಂತರ್ಪಣೆ ಹಾಗೂ ಅಯ್ಯಪ್ಪ ಮಾಲಾಧಾರಿಗಳಿಂದ ವಡೆ ತೆಗೆಯುವ ಸೇವೆ ಹಾಗೂ ಕೆಂಡ ಸೇವೆ ಭಾನುವಾರ ಜರುಗಿತು.
ಗಣಹೋಮ, ಸತ್ಯನಾರಾಯಣ ಪೂಜೆ, ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ, ಪಾಲಕ ವೃಕ್ಷದ ಪೂಜೆ ನೆರವೇರಿಸಲಾಯಿತು. ಬಳಿಕ ಮಾಳಿಕಾಪುರೋತ್ತಮ ದೇವಿಯ ಓಕುಳಿ, ಶ್ರೀ ಮಹಾಮಾಯ ಮಹಾಗಣಪತಿ ದೇವಸ್ಥಾನ ಶಿರಾಲಿಯಿಂದ ದೀಪಾಲಂಕೃತ ಮೆರವಣಿಗೆ ಜರುಗಿತು. ಚಿತ್ರಾಪುರ ಶ್ರೀ ಸ್ವಾಮಿಯ ಸನ್ನಿಧಾನದಲ್ಲಿ ಅಂದು ರಾತ್ರಿ ಭಕ್ತರ ಸಮ್ಮುಖದಲ್ಲಿ ಗುರುಸ್ವಾಮಿ ಶನಿಯಾರ ನಾಯ್ಕ ಅವರ ನೇತೃತ್ವದಲ್ಲಿ ಅಪ್ಪ ಸೇವೆ (ಬಿಸಿ ಎಣ್ಣೆಯಲ್ಲಿ ವಡೆ ತೆಗೆಯುವ ಸೇವೆ) 42 ಅಯ್ಯಪ್ಪ ಮಾಲಾಧಾರಿಗಳಿಂದ ನಡೆಯಿತು. ಅಗ್ನಿ ಪೂಜೆಯ ಬಳಿಕ ಕೆಂಡ ತುಳಿಯುವ ಸೇವೆ ಜರುಗಿತು. 5 ವರ್ಷದ ಮಾಲಾಧಾರಿ ಬಾಲಕರು ಕೆಂಡ ತುಳಿದಿದ್ದು ವಿಶೇಷವಾಗಿತ್ತು.