ಅಮೃತಾನ್ನ ಭೋಜನ ರದ್ದು

Mahabaleshwar_Temple Gokarna
Published on

ಗೋಕರ್ಣ: ದೇಶವನ್ನು ವ್ಯಾಪಿಸಿರುವ ಕರೊನಾ ವೈರಸ್ ನಾಶಕ್ಕೆ ಪ್ರಾರ್ಥಿಸಿ ಮಹಾಬಲೇಶ್ವರ ಆತ್ಮಲಿಂಗಕ್ಕೆ ಗಂಗಾಜಲದ ನಿರಂತರ ಧಾರಾ ಅಭಿಷೇಕ ಪೂಜೆಯನ್ನು ಗುರುವಾರ ಪ್ರದೋಷ ಕಾಲದಲ್ಲಿ ಪ್ರಾರಂಭಿಸಲಾಗಿದೆ. ಆತ್ಮಲಿಂಗ ಮೇಲೆ ಧಾರಾಪಾತ್ರೆಯನ್ನು ತೂಗಿ ಅದರಲ್ಲಿ ಗಂಗಾಜಲ ತುಂಬಿ ಅದು ನಿರಂತರವಾಗಿ ಆತ್ಮಲಿಂಗದ ಮೇಲೆ ಅರ್ಪಿಸಲ್ಪಡುವ ಈ ಅಭಿಷೇಕದಿಂದ ಮಹಾಬಲೇಶ್ವರ ಸಂಪ್ರೀತನಾಗಿ ಪ್ರಾರ್ಥಿಸಿದ್ದನ್ನು ದಯಪಾಲಿಸುತ್ತಾನೆ ಎಂಬ ನಂಬಿಕೆಯಿದೆ.

ಪೂಜೆ ಮತ್ತು ಭೋಜನ ಸ್ಥಗಿತ: ಜಿಲ್ಲಾಡಳಿತದ ಆದೇಶದ ಪ್ರಕಾರ ಮಹಾಬಲೇಶ್ವರ ಮಂದಿರ ಸೇರಿ ಇಲ್ಲಿನ ಎಲ್ಲ ಮುಖ್ಯ ಮಂದಿರಗಳಲ್ಲಿ ಗುರುವಾರ ಸಂಜೆಯಿಂದ ಸಾರ್ವಜನಿಕ ಪೂಜಾವಕಾಶವನ್ನು ಸ್ಥಗಿತಗೊಳಿಸಲಾಗಿದೆ. ಮಂದಿರದಲ್ಲಿ ನಿತ್ಯ ನೈಮಿತ್ತಿಕ ಪೂಜೆಗೆ ಮಾತ್ರ ಅವಕಾಶವಿದ್ದು ಅದರಲ್ಲಿ ಐದು ಜನಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳದಂತೆ ಆದೇಶಿಸಲಾಗಿದೆ. ಇದರ ಜೊತೆಗೆ ಮಂದಿರದ ಅಮೃತಾನ್ನ ಭೋಜನಾಲಯದಲ್ಲಿ ಮತ್ತು ಬ್ರಾಹ್ಮಣ ಪರಿಷತ್ ಭೋಜನಾಲಯದಲ್ಲಿ ಇದ್ದ ಸಾರ್ವಜನಿಕ ಊಟದ ವ್ಯವಸ್ಥೆ ಕೂಡ ರದ್ದಾಗಿದೆ.

ಮರಳಿದ ವಿದೇಶಿಯರು: ಹಿತ್ತಲಮಕ್ಕಿಯಲ್ಲಿ ನಿರ್ವಿುಸಲಾದ ಆರೋಗ್ಯ ಇಲಾಖೆ ತಪಾಸಣಾ ಕೇಂದ್ರ ಮತ್ತು ಪೊಲೀಸ್ ಚೆಕ್​ಪೋಸ್ಟ್​ನಲ್ಲಿ ಶುಕ್ರವಾರ ಆಗಮಿಸಿದ್ದ 4 ವಿದೇಶಿಯರನ್ನು ಮರಳಿ ಕಳಿಸಲಾಗಿದೆ.

ಪ್ರವಾಸಿಗರ ವಾಹನಗಳಿಗೆ ಎಚ್ಚರಿಕೆ: ಗೋಕರ್ಣವನ್ನು ಅಕ್ರಮವಾಗಿ ಪ್ರವೇಶಿಸುವ ದೇಶಿ ಅಥವಾ ವಿದೇಶಿ ಪ್ರವಾಸಿಗರಿಗೆ ಯಾವುದೇ ಬಗೆಯ ವಾಹನದ ವ್ಯವಸ್ಥೆ ಮಾಡಬಾರದಾಗಿ ಕುಮಟಾ ಉಪವಿಭಾಗಾಧಿಕಾರಿ ಅವರು ತಿಳಿಸಿದ್ದಾರೆ. ಕೆಲವರು ಅಕ್ರಮವಾಗಿ ನುಸುಳಲು ಸ್ಥಳೀಯ ವಾಹನ ಬಳಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಆದೇಶ ಮಾಡಲಾಗಿದೆ. ಯಾರಾದರೂ ಈ ಅಕೃತ್ಯದಲ್ಲಿ ಭಾಗಿಗಳಾಗಿರುವುದು ಕಂಡು ಬಂದಲ್ಲಿ ಅವರ ವಿರುದ್ಧ ಕೋವಿಡ್-19 ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಬಂಧಿಸಲಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net