ಅಭಿವೃದ್ಧಿ ಕೆಲಸಗಳಿಗೆ ಯತ್ನ

06 YLP 02
Published on

ಯಲ್ಲಾಪುರ: ತಾಲೂಕಿನ ಎಲ್ಲ ಗ್ರಾಪಂಗಳಿಗೂ ಭೇಟಿ ನೀಡಿ ಸಮಸ್ಯೆ ಮತ್ತು ಅಭಿವೃದ್ಧಿ ಅಗತ್ಯತೆ ಕುರಿತು ಮಾಹಿತಿ ಪಡೆದಿದ್ದೇನೆ. ನಮ್ಮ ಮಿತಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ತಾ.ಪಂ. ಅಧ್ಯಕ್ಷೆ ಚಂದ್ರಕಲಾ ಭಟ್ಟ ಹೇಳಿದರು.

ಸೋಮವಾರ ತಾ.ಪಂ ಸಭಾಭವನದಲ್ಲಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ಪಶ್ಚಿಮಘಟ್ಟ ಪ್ರದೇಶಕ್ಕೆ ಅನ್ವಯಿಸಬಾರದು. ಪ್ರಾದೇಶಿಕ ಸೂಕ್ಷ್ಮತೆಗಳನ್ನು ಭೂಬಳಕೆ ನೀತಿ ರೂಪಿಸಿ ಅದರಂತೆ ಕಾಯ್ದೆ ತಿದ್ದುಪಡಿ ಮಾಡಬೇಕು. ಕೃಷಿ ಭೂಮಿಯನ್ನು ಕೊಂಡುಕೊಳ್ಳುವವರು ಕನಿಷ್ಠ 30 ವರ್ಷವಾದರೂ ಅದನ್ನು ಕೃಷಿ ಕಾರ್ಯಕ್ಕೇ ಉಪಯೋಗಿಸುವ ಹಾಗೂ 30 ವರ್ಷ ಅದನ್ನು ಪರಭಾರೆ ಮಾಡದಂತೆ ಷರತ್ತು ವಿಧಿಸಬೇಕು. ಈಗಿರುವ ಕೃಷಿ ಜಮೀನಿನ ಗರಿಷ್ಠ ಮಿತಿ ಹೆಚ್ಚಿಸಬಾರದು ಎಂದು ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಡೆದ ಭೂಸುಧಾರಣೆ ಕಾಯ್ದೆಯ ಸಾಧಕ ಬಾಧಕಗಳ ಸಮಾಲೋಚನೆ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಮೋದಿಸಿ, ಠರಾವು ಮಾಡಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್, ಈವರೆಗೆ ತಾಲೂಕಿನ 701 ಜನರ ಗಂಟಲದ್ರವ ಪರೀಕ್ಷೆ ನಡೆಸಲಾಗಿದ್ದು, ಒಟ್ಟು 33 ಜನರಿಗೆ ಪಾಸಿಟಿವ್ ಬಂದಿದೆ. ಸೋಂಕಿನ ಲಕ್ಷಣ ಇಲ್ಲದ ಸೋಂಕಿತರಿಗೆ ಯಲ್ಲಾಪುರದಲ್ಲೇ ಚಿಕಿತ್ಸೆ ನೀಡಲು ತಾಲೂಕು ಆಸ್ಪತ್ರೆ ಹಾಗೂ ಕಾಳಮ್ಮನಗರದ ಹಾಸ್ಟೆಲ್ ಒಂದರಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, 3-4 ದಿನಗಳಲ್ಲಿ ಸ್ಥಳೀಯವಾಗಿ ಚಿಕಿತ್ಸೆ ಆರಂಭಿಸಲಾಗುವುದು. ಬೇರೆ ರಾಜ್ಯ, ಜಿಲ್ಲೆಗಳಿಂದ ಬಂದವರೆಲ್ಲ ಕನಿಷ್ಠ 7 ದಿನವಾದರೂ ಮನೆಯಲ್ಲಿ ಕ್ವಾರಂಟೈನ್ ಕಡ್ಡಾಯವಾಗಿ ಮಾಡಲೇಬೇಕು. ಅದರ ಹೊರತಾಗಿ ಕರೊನಾ ನಿಯಂತ್ರಣ ಸಾಧ್ಯವಿಲ್ಲ ಎಂದ ಅವರು, ಜನತೆಗೆ ಕೆಮ್ಮು, ಜ್ವರ, ಗಂಟಲ ನೋವಿನಂತಹ ಲಕ್ಷಣಗಳು ಕಂಡುಬಂದಲ್ಲಿ ತಾಲೂಕು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಬೆಳಗ್ಗೆ 9 ರಿಂದ 12ರವರೆಗೆ ಗಂಟಲದ್ರವ ತಪಾಸಣೆ ನಡೆಯುತ್ತಿದೆ ಎಂದರು.

ತಾಲೂಕಿನ ಪ್ರವಾಸಿ ತಾಣಗಳಿಗೆ ಹೊರ ಜಿಲ್ಲೆಗಳಿಂದ ಪ್ರವಾಸಿಗರು ಬರುವುದನ್ನು ತಡೆಯಬೇಕು. ಹಾಗಾಗಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ತಾ.ಪಂ ಸದಸ್ಯರಾದ ಲಕ್ಷ್ಮೀನಾರಾಯಣ ಗುಮ್ಮಾನಿ, ಸುಬ್ಬಣ್ಣ ಬೋಳ್ಮನೆ ಆಗ್ರಹಿಸಿದರು.

ಜಿ.ಪಂ ಸದಸ್ಯರಾದ ಶ್ರುತಿ ಹೆಗಡೆ, ರೂಪಾ ಬೂರ್ಮನೆ, ತಾ.ಪಂ ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ತಿನೆಕರ್, ಸದಸ್ಯರಾದ ನಾಗರಾಜ ಕವಡಿಕೆರೆ, ನಟರಾಜ ಗೌಡರ್, ಭವ್ಯಾ ಶೆಟ್ಟಿ, ರಾಧಾ ಹೆಗಡೆ, ಮಂಗಲಾ ನಾಯ್ಕ, ತಾ.ಪಂ ಇಒ ಜಗದೀಶ ಕಮ್ಮಾರ, ವ್ಯವಸ್ಥಾಪಕ ಎಸ್. ಆರ್. ಆಚಾರಿ, ಲೆಕ್ಕಾಧಿಕಾರಿ ಮೋಹನ ಉಪಸ್ಥಿತರಿದ್ದರು.

ಸೇನಾನಿಗಳಿಗೆ ಗೌರವ
ಸಭೆಯಲ್ಲಿ ಕರೊನಾ ಸೇನಾನಿಗಳಿಗೆ ತಾ.ಪಂ ವತಿಯಿಂದ ಗೌರವಿಸಲಾಯಿತು. ತಹಸೀಲ್ದಾರ್ ಡಿ. ಜಿ. ಹೆಗಡೆ, ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್, ಸಿಪಿಐ ಸುರೇಶ ಯಳ್ಳೂರು, ಬಿಆರ್​ಸಿ ಸಂಯೋಜನಾಧಿಕಾರಿ ಶ್ರೀರಾಮ ಹೆಗಡೆ, ಅಂಗನವಾಡಿ ಮೇಲ್ವಿಚಾರಕಿ ಪ್ರಮೋದಿನಿ, ತಮ್ಮ ಇಲಾಖೆಗಳ ಪರವಾಗಿ ಗೌರವ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net