ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ಬೇಡ

27KWR2
Published on

ಕಾರವಾರ: ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ಮಾಡದೆ ಸಹಕಾರ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ವಿರೋಧ ಪಕ್ಷದ ನಾಯಕರಲ್ಲಿ ವಿನಂತಿಸಿದರು.

ಬಿಜೆಪಿ ಸರ್ಕಾರ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವರ್ಚುವಲ್ ಫ್ಲ್ಯಾಟ್​ಫಾಮ್ರ್ ಕಾರ್ಯಕ್ರಮ ಉದ್ಘಾಟಿಸಿ, ಸರ್ಕಾರದ ಸಾಧನೆಗಳ ಪುಸ್ತಕ ಬಿಡುಗಡೆ ಮಾಡಿ, ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಅಲಗೇರಿ ವಿಮಾನ ಇಲ್ದಾಣಕ್ಕಾಗಿ ಸಚಿವ ಆರ್.ವಿ. ದೇಶಪಾಂಡೆ ಅವರೂ ಸಾಕಷ್ಟು ಪ್ರಯತ್ನ ಮಾಡಿದ್ದರು. ಇದರಿಂದ ವಿಮಾನ ನಿಲ್ದಾಣದ ಕನಸು ನನಸಾಗುತ್ತಿದೆ. ಸ್ಥಳೀಯ ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅವರಿಗೆ ಯೋಜನೆಯ ಸಂಪೂರ್ಣ ಮಾಹಿತಿ ನೀಡಿ ಕಾಮಗಾರಿ ಪ್ರಾರಂಭಿಸಲಾಗುವುದು. ಹುಬ್ಬಳ್ಳಿ-ಅಂಕೋಲಾ ರೈಲ್ವೆ,, ಸಾಗರ ಮಾಲಾ ಯೋಜನೆ ಮುಂತಾದ ವಿಷಯಗಳಲ್ಲಿ ಇಲ್ಲಿನ ಕೆಲ ಮುಖಂಡರು ರಾಜಕೀಯ ಮಾಡಬಾರದು. ಯೋಜನೆಗಳು ಒಮ್ಮೆ ಕೈತಪ್ಪಿದರೆ ಮತ್ತೆ ಸಿಗುವುದಿಲ್ಲ ಎಂದು ಮನವಿ ಮಾಡಿದರು.

ಸಹಕರಿಸಿ: ಕರೊನಾ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್​ಪಿ ಹಾಗೂ ಕ್ರಿಮ್್ಸ ನಿರ್ದೇಶಕರ ನೇತೃತ್ವದಲ್ಲಿ ಸಾವಿರಾರು ನೌಕರರು ತಮ್ಮ ಜೀವ ಒತ್ತೆಯಿಟ್ಟು ದುಡಿಯುತ್ತಿದ್ದಾರೆ. ಸಣ್ಣಪುಟ್ಟ ಲೋಪಗಳಾಗುವುದು ಸಹಜ. ಅದನ್ನು ದೊಡ್ಡದು ಮಾಡದೇ ಅವರಿಗೆ ಸಹಕಾರ ಮಾಡಿ. ದೊಡ್ಡ ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತಂದಲ್ಲಿ ಬಗೆಹರಿಸಲಾಗುವುದು ಎಂದರು. ರೋಗ ಲಕ್ಷಣ ಇಲ್ಲದವರೂ ಕರೊನಾ ಕೇರ್ ಸೆಂಟರ್​ಗೆ ಹೋಗಬೇಕು ಎಂದು ಸೂಚಿಸಿದರು.

ವಸತಿ ಸಮುಚ್ಛಯ ಉದ್ಘಾಟನೆ: ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ಕಾಜುಬಾಗದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದ ಸಮೀಪ ನಿರ್ವಣವಾದ 6 ಅಧಿಕಾರಿಗಳ ಹಾಗೂ 120 ಪೊಲೀಸ್ ಸಿಬ್ಬಂದಿ ವಸತಿ ಗೃಹಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಿದರು. ಶಾಸಕಿ ರೂಪಾಲಿ ನಾಯ್ಕ, ಮಾತನಾಡಿ, ಪೊಲೀಸ್ ವಸತಿ ಸಂಕೀರ್ಣದ ಸಮೀಪ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಣಕ್ಕಾಗಿ ಶಾಸಕರ ನಿಧಿಯಲ್ಲಿ 10 ಲಕ್ಷ ರೂ. ನೀಡಿರುವುದಾಗಿ ತಿಳಿಸಿದರು. ಎಂಎಲ್​ಸಿ ಶಾಂತಾರಾಮ ಸಿದ್ದಿ, ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ., ಜಿಪಂ ಸಿಇಒ ಎಂ. ರೋಶನ್, ಎಸ್​ಪಿ ಶಿವಪ್ರಕಾಶ ದೇವರಾಜು ಇದ್ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಡಿಯೋ ಕಾನ್ಪರೆನ್ಸ್ ಮೂಲಕ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net