

ಬಾಗಲಕೋಟೆ: ಕರ್ನಾಟಕ ಪ್ರತ್ಯೇಕ ರಾಜ್ಯವಾಗಿ ೫ ದಶಕ ಕಳೆದರು ಕಿತ್ತೂರು ಕರ್ನಾಟಕ ಭಾಗ ಅಭಿವೃದ್ಧಿ ಕಂಡಿಲ್ಲ. ಅಧಿಕಾರಕ್ಕೆ ಬಂದ ಪ್ರತಿಯೊಂದು ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಾ ಬಂದಿವೆ. ಹೀಗಾಗಿ ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯದ ಆಶಯದೊಂದಿಗೆ ಕಿತ್ತೂರ ಕಲ್ಯಾಣ ಕರ್ನಾಟಕ ಸೇನಾ ಪಕ್ಷ ಸ್ಥಾಪಿಸಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸಿದ್ದನಗೌಡ ಪಾಟೀಲ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧೦ ವರ್ಷದಿಂದ ಈ ಭಾಗದ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಉತ್ತರ ಕರ್ನಾಟಕಕ್ಕೆ ಸಮಾನಾಗಿ ಅನುದಾನ ಹಂಚದೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನೂತನವಾಗಿ ಕಿತ್ತೂರ ಕನ್ಯಾಣ ಕರ್ನಾಟಕ ಸೇನಾ ಪಕ್ಷ ಸ್ಥಾಪಿಸಲಾಗಿದೆ ಎಂದರು.
ನೀಲೇಶ ಬಣ್ಣೂರ ಮಾತನಾಡಿ, ಬೆಳಗಾವಿ ಸುರ್ವಣ ಸೌಧದಲ್ಲಿ ಮಂತ್ರಿಗಳು ಹಾಗೂ ಸರ್ಕಾರದ ಕಾರ್ಯದರ್ಶಿ ಮಟ್ಟದ ಕಚೇರಿ ಸ್ಥಾಪನೆ, ನೆರೆ ಹಾಗೂ ಬರ ಪೀಡಿತ ಪ್ರದೇಶಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದು, ಉದ್ಯೂಗ ಸೃಷ್ಠಿ, ಕೈಗಾರಿಕೆ ಸ್ಥಾಪನೆ, ಕುಡಚಿ-ಬಾಗಲಕೋಟೆ ರೈಲ್ವೆ ಕಾಮಗಾರಿ ಪೂರ್ಣಗೊಳಿಸುವುದು, ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೀಗೆ ಹಲವು ಉದ್ದೇಶಗಳನ್ನು ಪಕ್ಷ ಇಟ್ಟುಕೊಂಡಿದ್ದು ಜನರ ವಿಶ್ವಾಸದೊಂದಿಗೆ ಮುನ್ನಡೆಯುತ್ತೇವೆ. ಮುಂದಿನ ಹಂತದಲ್ಲಿ ಉತ್ತರ ಕರ್ನಾಟಕ ೧೪ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುತ್ತೇವೆ ಎಂದು ಹೇಳಿದರು.
ಮುಖಂಡರಾದ ಗಿರೀಶ ಭಾಂಡಗೆ, ಶ್ರೀಶೈಲ ಪ್ರಸಾದ, ಸಂಗಮೇಶ ಬಿಳಿಯೆಲಿ ಇತರರಿದ್ದರು.