ಅಭಿಯಾನದ ರೂಪದಲ್ಲಿ ಕಾರ್ಯ ಕೈಗೊಳ್ಳಿ

bkt-12-2
Published on

ಬಾಗಲಕೋಟೆ: ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಭಿಯಾನದ ರೂಪದಲ್ಲಿ ಕಾರ್ಯ ಕೈಗೊಳ್ಳಬೇಕೆಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯತ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿಯೊಂದು ಕಾರ್ಯದಲ್ಲಿ ಬೇಜವಾಬ್ದಾರಿ ಸಲ್ಲದು. ಕರ್ತವ್ಯ ನಿಷ್ಠೇಯಿಂದ ಪ್ರಮಾಣಿಕವಾಗಿ ಕೆಲಸ ನಿರ್ವಹಿಸಿದಲ್ಲಿ ಯೋಜನೆಗಳಿಗೆ ಬೆಲೆ ದೊರೆಯುತ್ತದೆ. ಇದರಿಂದ ಜನರಿಗೆ ಯೋಜನೆಗಳ ಲಾಭ ಸಿಗಲಿದೆ. ಬಾಕಿ ಉಳಿದ ಕಾರ್ಯವನ್ನು ಅಭಿಯಾನದ ರೂಪದಲ್ಲಿ ಕಾರ್ಯ ಕೈಗೊಂಡು ಪೂರ್ಣಗೊಳಿಸಲು ಸೂಚಿಸಿದರು.

ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ತೆರಿಗೆ ವಸೂಲಾತಿ ಪ್ರಮಾಣ ಕುಂಠಿತಗೊಂಡಿದ್ದು, ಪ್ರಸ್ತುತ ವರ್ಷದ ಬೇಡಿಕೆಯಂತೆ ಕರ ವಸೂಲಾತಿಗೆ ಕ್ರಮಕೈಗೊಳ್ಳಬೇಕು. ಜಿಲ್ಲೆಗೆ ಮಂಜೂರಾದ ಎಲ್ಲ 157 ಕೂಸಿನ ಮನೆ ಕೇಂದ್ರವನ್ನು ತಕ್ಷಣವೇ ಪ್ರಾರಂಭಿಸಿ, ಕೇಂದ್ರಕ್ಕೆ ಬೇಕಾದ ಸೌಭ್ಯಗಳನ್ನು ಕಲ್ಪಿಸಲು ತಿಳಿಸಿದರು. ಜಿಲ್ಲೆಯಲ್ಲಿ ಹೊಸದಾಗಿ ಮಂಜೂರಾದ 22 ಗ್ರಂಥಾಲಯಗಳನ್ನು ಪ್ರಾರಂಭಿಸಲು ಹಾಗೂ ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸಲು ಸೂಚಿಸಿದರು.

ಗ್ರಾಮ ಪಂಚಾಯತಿವಾರು ಪ್ರಗತಿ ಪರಿಶೀಲನೆ ನಡೆಸಿದ ಸಿಇಓ ಕುರೇರ ಅವರು ಸ್ವಚ್ಛ ಭಾರತ ಮಿಷನ್‍ದಡಿ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಫಲಾನುಭವಿಗಳ ಆಯ್ಕೆ ಮಾಡಿ ನಿಗದಿತ ಅವಧಿಯಲ್ಲಿ ಪ್ರಗತಿ ಸಾಧಿಸಬೇಕು. ಈಗಾಗಲೇ ಜಿಲ್ಲೆಯ 195 ಗ್ರಾಮ ಪಂಚಾಯತಿ ಪೈಕಿ 177 ಸ್ವ-ಸಹಾಯ ಸಂಘದ ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಿ ಡ್ರೈವಿಂಗ್ ಲೈಸೆನ್ಸ್ ಕೊಡಿಸಲಾಗಿದೆ ಎಂದು ತಿಳಿಸಿದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯತಿವಾರು ಟಾರಗೇಟ್ ಕೊಡುವ ಮೂಲಕ ಪ್ರಗತಿ ಆಗುವಂತೆ ಮಾಡಬೇಕು ಎಂದರು.

15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ನಿಗದಿತ ಅವಧಿಯೊಳಗೆ ಖರ್ಚು ಭರಿಸಿ ಪ್ರಗತಿ ಸಾಧಿಸಲು ತಿಳಿಸಿದರು. ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ ನೀಡಿದ ಗುರಿಯಂತೆ ಮಾನವ ದಿನಗಳನ್ನು ಸೃಜಿಸಲು ತಿಳಿಸಿದರು. ವಸತಿ ಯೋಜನೆಯಡಿ ಬಸವ ವಸತಿ ಮತ್ತು ಅಂಬೇಡ್ಕರ ವಸತಿ ಯೋಜನೆಯಡಿ ನೀಡಲಾದ ಗುರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗಳಿಸಲು ತಿಳಿಸಿದರು. ಇತರೆ ಯೋಜನೆಗಳ ಬಗ್ಗೆ ನಿಗದಿತ ಅವಧಿಯಲ್ಲಿ ಪ್ರಗತಿ ಸಾಧಿಸಲು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಯೋಜನಾಧಿಕಾರಿ ಪುನಿತ್, ಯೋಜನಾ ನಿರ್ದೇಶಕ ಎನ್.ವಾಯ್.ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಸಹಾಯಕ ಕಾರ್ಯದರ್ಶಿ ವೆಂಟಕೇಶ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net