

ರಾಣೆಬೆನ್ನೂರ: ನಗರ ಸೇರಿ ತಾಲೂಕಿನಾದ್ಯಂತ ಮಂಗಳವಾರ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುರಿದ ಭಾರಿ ಮಳೆಯಿಂದಾಗಿ ಉಳ್ಳಾಗಡ್ಡಿ, ಬೆಳ್ಳುಳ್ಳಿ, ಶೇಂಗಾ ಬೆಳೆಗಳು ನೀರು ಪಾಲಾಗಿವೆ.
ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ನಷ್ಟು ಉಳ್ಳಾಗಡ್ಡಿ, 8 ಸಾವಿರ ಹೆಕ್ಟೇರ್ ಬೆಳ್ಳುಳ್ಳಿ, 1504 ಹೆಕ್ಟೇರ್ ಶೇಂಗಾ ಹಾಗೂ 50 ಸಾವಿರಕ್ಕೂ ಅಧಿಕ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ನಿರಂತರ ಮಳೆ ನಡುವೆಯೂ ರೈತರು ಹೆಚ್ಚಿನ ಔಷಧ, ಗೊಬ್ಬರ ಹಾಕಿ ಉಳಿಸಿಕೊಂಡಿದ್ದರು.
ಆದರೆ, ಮಂಗಳವಾರ ರಾತ್ರಿ ಸುರಿದ ಮಳೆಗೆ ಉಳ್ಳಾಗಡ್ಡಿ ಗೂಡುಗಳು, ಬೆಳ್ಳುಳ್ಳಿ ಹಾಗೂ ಶೇಂಗಾ ಬೆಳೆ ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿವೆ. ತೆನೆ ಕಟ್ಟಿದ ಮೆಕ್ಕೆಜೋಳದ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದ್ದು, ಕಟಾವು ಮಾಡಲು ಆಗದ ಸ್ಥಿತಿಗೆ ತಲುಪಿವೆ. ಆದ್ದರಿಂದ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಅಧಿಕಾರಿಗಳು ಕೂಡಲೆ ಬೆಳೆಹಾನಿ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕೈಗೆ ಬಂದ ಉಳ್ಳಾಗಡ್ಡಿ ಮಾರಾಟಕ್ಕೆ ಬರಲಿಲ್ಲ: ಸದ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ಥಳೀಯ ಉಳ್ಳಾಗಡ್ಡಿಗೆ 1 ಕ್ವಿಂಟಾಲ್ಗೆ 7 ಸಾವಿರ ರೂ.ವರೆಗೂ ದರವಿದೆ. ಆದರೆ, ರೈತರ ಕೈಗೆ ಬಂದ ಉಳ್ಳಾಗಡ್ಡಿ ಸಂಪೂರ್ಣ ನೀರು ಪಾಲಾಗಿದೆ. ಹೀಗಾಗಿ, ಎಪಿಎಂಸಿಗೆ ನಿತ್ಯ 400ರಿಂದ 600 ಚೀಲದಷ್ಟು ಉಳ್ಳಾಗಡ್ಡಿ ಮಾತ್ರ ಬರುತ್ತಿದೆ. ಗಡ್ಡಿ ಹಸಿಯಾಗಿದ್ದರೆ ಕ್ವಿಂಟಾಲ್ಗೆ 300 ರೂ. ಮಾತ್ರ ದೊರೆಯುತ್ತಿದೆ. ಇದರ ನಡುವೆ ಮಳೆಯನ್ನೇ ಬಂಡವಾಳ ಮಾಡಿಕೊಂಡ ದಲ್ಲಾಳಿಗಳು ನಾಸಿಕ್ನಿಂದ ಉಳ್ಳಾಗಡ್ಡಿ ತಂದು ಮಾರಾಟ ಮಾಡುತ್ತಿದ್ದಾರೆ. ನಿತ್ಯವೂ ಇಲ್ಲಿಯ ಎಪಿಎಂಸಿಗೆ 1 ಸಾವಿರದಿಂದ 1200 ಚೀಲದಷ್ಟು ನಾಸಿಕ್ ಉಳ್ಳಾಗಡ್ಡಿ ಬರುತ್ತಿದ್ದು, ಸದ್ಯ ಕ್ವಿಂಟಾಲ್ಗೆ 9 ಸಾವಿರ ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಉಳ್ಳಾಗಡ್ಡಿಗೆ ಉತ್ತಮ ದರವಿದೆಯಾದರೂ ಬೆಳೆಯೆಲ್ಲ ನೀರಿನಲ್ಲಿ ತೊಯ್ದಿರುವುದರಿಂದ ರೈತರು ಸಂಕಟಪಡುವಂತಾಗಿದೆ. ಕಳೆದ ವರ್ಷವೂ ಉಳ್ಳಾಗಡ್ಡಿ ಬೆಳೆಗಾರರ ಪರಿಸ್ಥಿತಿ ಹೀಗೆಯೇ ಆಗಿತ್ತು.
ಮಳೆಯ ನಡುವೆಯೂ ಔಷಧ, ಗೊಬ್ಬರ ನೀಡಿ ಉಳ್ಳಾಗಡ್ಡಿ ಬೆಳೆ ಉಳಿಸಿಕೊಂಡಿದ್ದೆವು. ಆದರೆ, ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಉಳ್ಳಾಗಡ್ಡಿ ಗೂಡುಗಳು ಮಣ್ಣು ಪಾಲಾಗಿವೆ. ಮಾರುಕಟ್ಟೆಯಲ್ಲಿನ ಬೆಲೆ ನೋಡಿದರೆ ಕರಳು ಚುರ್ ಎನ್ನುತ್ತದೆ. ಕಳೆದ ವರ್ಷವೂ ನಮ್ಮ ಸ್ಥಿತಿ ಇದೆ ಆಗಿತ್ತು. | ಗಜೇಂದ್ರ ಹರಿಯಾಳದವರ, ಉಳ್ಳಾಗಡ್ಡಿ ಬೆಳೆಗಾರ
ಮಳೆಯಿಂದಾಗಿ ಇಬ್ಬರು ರೈತರು ಮೃತಪಟ್ಟಿದ್ದಾರೆ. 232 ಹೆಕ್ಟೇರ್ ಕೃಷಿ ಬೆಳೆ, 1200 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿರುವ ಮಾಹಿತಿ ಸಿಕ್ಕಿದೆ. ಸಮೀಕ್ಷೆ ಇನ್ನೂ ಮುಂದುವರಿದಿದ್ದು, ಪೂರ್ಣಗೊಂಡ ಬಳಿಕ ಹಾನಿಯ ಪ್ರಮಾಣ ತಿಳಿದು ಬರಲಿದೆ. ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. | ಬಸನಗೌಡ ಕೋಟೂರ, ತಹಸೀಲ್ದಾರ್