ಅಬ್ಬರದ ಮಳೆಗೆ ಕೊಚ್ಚಿ ಹೋದ ಸೇತುವೆ

FotoJet
Published on

 ಮಂಚನಬೆಲೆ ಜಲಾಶಯದಿಂದ 2500 ಕ್ಯೂಸೆಕ್ ನೀರು ಹೊರಕ್ಕೆ |  ನೀರಿನ ಸೆಳೆತಕ್ಕೆ ಸಿಲುಕಿದ್ದವನ ರಕ್ಷಣೆ

 ಮಾಗಡಿ : ಧಾರಾಕಾರ ಸುರಿದ ಮಳೆ ತಾಲೂಕಿನಾದ್ಯಂತ ಹಲವು ಸಮಸ್ಯೆ ಸೃಷ್ಟಿಸಿದ್ದು, ಮಂಚನಬೆಲೆ ಜಲಾಶಯ ಸಮೀಪದ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದೆ. ಬೆಳೆಗಳು ಜಲಾವೃತವಾಗಿದ್ದು, ಬಹುತೇಕ ಕೆರೆ, ಕಟ್ಟೆಗಳು ಕೋಡಿಯಾಗಿವೆ. ಕೆಲವೆಡೆ ಹಳೆಯ ಮನೆಗಳು ಕುಸಿದಿವೆ.

ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಒಳ ಹರಿವು ಹೆಚ್ಚಾದ ಕಾರಣ ಜಲಾಶಯದಿಂದ ಸುಮಾರು 2500 ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಈ ಪರಿಣಾಮ ಸಾರ್ವಜನಿಕರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಕೊಚ್ಚಿಹೋಗಿದೆ.

ತಾಲೂಕಿನ ಮಂಚನಬೆಲೆ ಜಲಾಶಯದ ಬಳಿಯ ಸೇತುವೆ 3 ವರ್ಷದ ಹಿಂದೆಯೇ ಕೊಚ್ಚಿಹೋಗಿತ್ತು. ಒಂದೂವರೆ ವರ್ಷದ ಹಿಂದೆ 30 ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಪುನಃ ಹಾನಿಯಾಗಿರುವುದರಿಂದ ಮಂಚನಬೆಲೆ ಗ್ರಾಮಸ್ಥರು ಮಾಗಡಿ ಪಟ್ಟಣಕ್ಕೆ ತೆರಳಲು ತಿಪ್ಪಗೊಂಡನಹಳ್ಳಿ, ಗಾಣಕಲ್ಲು ಮೂಲಕ ಸುಮಾರು 20 ಕಿ.ಮೀ ಸುತ್ತಿಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಸ್ಥಳೀಯರಿಗೆ ಯಾವುದೇ ಮುನ್ನೆಚ್ಚರಿಕೆ ತಿಳಿಸದೆ ಜಲಾಶಯದಿಂದ ಅಧಿಕಾರಿಗಳು ಏಕಾಏಕಿ ನೀರು ಹರಿಸಿದ್ದಕ್ಕೆ ಸ್ಥಳೀಯರಿಂದ ಆಕ್ಷೇಪ ಕೇಳಿ ಬಂದಿದೆ.

ಬೈಕ್ ಸವಾರನ ರಕ್ಷಣೆ: ಸೇತುವ ಕುಸಿಯುವ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೂ ನೀರಿನಲ್ಲಿ ಕೊಚ್ಚಿಹೋಗಿದ್ದು, ಅದೃಷ್ಟವಶಾತ್ ಸ್ಥಳದಲ್ಲಿದ್ದವರು ಆತನನ್ನು ರಕ್ಷಿಸಿದ್ದಾರೆ.

ಸಾರ್ವಜನಿಕರಿಗೆ ಸಂಕಷ್ಟ: ಮಂಚನಬೆಲೆ ಜಲಾಶಯದ ಬಳಿ ಸಾಕಷ್ಟು ರೈತರು ಹಸು, ಕುರಿ, ಮೇಕೆಗಳನ್ನು ಮೇಯಿಸಲು ತೆರಳಿದರು. ಆದರೆ, ಇದ್ದಕ್ಕಿದಂತೆ ಜಲಾಶಯದಿಂದ ನೀರು ಹೊರಬಿಟ್ಟ ಕಾರಣ ಸಾಕಷ್ಟು ಮಂದಿ ರೈತರು ಹಾಗೂ ಸಾಕುಪ್ರಾಣಿಗಳು ಗ್ರಾಮಗಳಿಗೆ ಬರಲಾಗದೆ ಸಂಕಷ್ಟ ಅನುಭವಿಸುವಂತಾಯಿತು.

ಹಲವೆಡೆ ಅಸ್ತವ್ಯಸ್ತ 

ತಾಲೂಕಿನ ಹಾರೋಹಳ್ಳಿಯಿಂದ ಬಸವನಪಾಳ್ಯಕ್ಕೆ ತೆರಳುವ ಮಾರ್ಗದಲ್ಲಿದ್ದ ಸೇತುವೆ ಕುಸಿದು ಸಂಪರ್ಕ ಕಡಿತವಾಗಿದೆ. ತಗಚ್ಚಕುಪ್ಪೆ ಬಳಿ ಕೆಶಿಫ್‌ನಿಂದ ನಿರ್ಮಿಸಿದ್ದ ಬ್ರಿಜ್ ಜಲಾವೃತ್ತವಾಗಿದೆ. ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಬಾಚೇನ ಹಟ್ಟಿ ಕೆರೆ ಏರಿ ಒಡೆದ ಪರಿಣಾಮ ಬೆಳೆಗಳು ಜಲಾವೃತವಾಗಿವೆ.*** ಕ್ಕತೊರೆ ಪಾಳ್ಯದ ಕಾಲನಿಯ ಮೂರ್ತಿ ನಾಯ್ಕ ಅವರ ಮನೆಗೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ಮನೆಯಲ್ಲಿದ್ದವರು ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಬೆಳಗುಂಬ ಗ್ರಾಪಂ ವ್ಯಾಪ್ತಿಯ ಮುತ್ತರಾಯನ ಗುಡಿಪಾಳ್ಯದ ತಿಮ್ಮಕ್ಕ ಅವರ ಮನೆ ಸಂಪೂರ್ಣ ಕುಸಿದಿದ್ದು, ದಿನಸಿ, ಪದಾರ್ಥಗಳು ನೀರುಪಾಲಾಗಿದೆ.

ಗೌರಮ್ಮನ ಕೆರೆ, ಬೆಳಗುಂಬ ಕೆರೆ, ಕರೇನಹಳ್ಳಿ ಕೆರೆ, ಕಾಳಾರಿ ಕೆರೆ, ಕಲ್ಯ ಕೆರೆ ಸೇರಿ ಬಹುತೇಕ ದೊಡ್ಡ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಬೆಳಗುಂಬ, ಕೆಂಪಸಾಗರ, ಗುಡೇಮಾರನಹಳ್ಳಿ, ಬೈರನಹಳ್ಳಿ, ಸಾತನೂರು ಬಂಟರಕುಪ್ಪೆ, ರಂಗಯ್ಯನಪಾಳ್ಯ, ತೋರೇಚೆನಹಳ್ಳಿ ಬಳಿ ತೆಂಗು, ಅಡಕೆ, ಬಾಳೆ, ರಾಗಿ, ತೊಗರಿ, ಕಡಲೆ ಬೆಳೆಗಳು ಜಲಾವೃತವಾಗಿದೆ.

ಕೊಚ್ಚಿಹೋದ ಸವಾರ

ಬೆಳಗುಂಬದಿಂದ ಮಾಗಡಿಗೆ ಬರುತ್ತಿದ್ದಾಗ ನೀರಿನ ಸೆಳೆತಕ್ಕೆ ಮೆಡಿಕಲ್ಸ್‌ನ ಉದ್ಯೋಗಿಯ ಬೈಕ್ ಕೊಚ್ಚಿಹೋಗಿದ್ದಾರೆ. ರಂಗಯ್ಯನ ಪಾಳ್ಯದ ಬಳಿ ವೆಂಕಟಾಚಲಯ್ಯ ಎಂಬುವರು ತೋರೆಚನಹಳ್ಳಿ ಗೇಟ್ ಬಳಿಯ ಡೇರಿಗೆ ತೆರಳುವಾಗ ರಸ್ತೆ ಮೇಲೆ ನೀರು ಹೆಚ್ಚಾಗಿ ಕೊಚ್ಚಿಹೋಗುವ ವೇಳೆ ಸ್ಥಳೀಯರು ರಕ್ಷಿಸಿದ್ದಾರೆ.

ವಿದ್ಯುತ್ ಕಡಿತ

ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.. ಇನ್ನು ರೈತರ ಹಸು, ಕುರಿ, ಮೇಕೆಗಳನ್ನು ಮೇಯಿಸಲು ಹೊಲಗಳ ಬಳಿ ತೆರಳಲು ಸಾಧ್ಯವಾಗದೆ ಮೇವು ತರಲು ರೈತರು ಪಡುದಾಡಿದರು.

ನೀತಿ ಸಂಹಿತೆ ಅಡ್ಡಿ

ಚನ್ನಪಟ್ಟಣ ಉಪಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಜಲಾವೃತಗೊಂಡ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗದ ಕಾರಣ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net