

ವಿಜಯವಾಣಿ ಸುದ್ದಿಜಾಲ ಕಾರವಾರ
ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 1.20 ಲಕ್ಷ ರೂ. ದಂಡ ವಿಧಿಸಿ ಕಾರವಾರದ ಜಿಲ್ಲಾ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಮುಂಡಗೋಡ ಓರಲಗಿಯ ಶಿವಾನಂದ ಉಮ್ಮಣ್ಣ ಗೌಳಿ(60)ಶಿಕ್ಷೆಗೊಳಗಾದ ಅಪರಾಧಿ.
2021 ರ ಸೆಪ್ಟೆಂಬರ್‌ನಲ್ಲಿ ಅಪ್ರಾಪ್ತೆಯ ತಾಯಿ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶಿವಾನಂದ ಗೌಳಿ ಅಪ್ರಾಪ್ತೆಯನ್ನು ಹೊಲಕ್ಕೆ ಹಾಗೂ ತನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ದೂರಿದ್ದಳು. ಪಿಎಸ್‌ಐ ಬಸವರಾಜ ಮಬನೂರು ಫೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇನ್ಸ್ಪೆಕ್ಟರ್ ಸಿದ್ದಪ್ಪ ಸಿಮಾನಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಸೆಶನ್ಸ್ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕಿ ಶುಭಾ ಗಾಂವಕರ್ ವಾದ ಮಂಡಿಸಿದ್ದರು.