ಅಪ್ಪನ ಕನಸು ನನಸು ಮಾಡಿದ ಸಂಭ್ರಮದ ಕ್ಷಣ

30a858f7-03f9-4f88-8036-8538cc5ea7ea
ತೋಟಗಾರಿಕೆ ವಿವಿ ಘಟಿಕೋತ್ಸವದಲ್ಲಿ ೧೬ ಚಿನ್ನದ ಪದಕ ಪಡೆದ ಬೀದರನ ಅಮೂಲ್ಯ ಪಾಟೀಲ ಅವರು ತಂದೆ-ತಾಯಿ ಜೊತೆಗೆ ಸಂಭ್ರಮ ಹಂಚಿಕೊಂಡರು.
Published on

ಅಶೋಕ ಶೆಟ್ಟರ, ಬಾಗಲಕೋಟೆ: ನಾನು ಬಿಎಸ್ಸಿ ತೋಟಗಾರಿಕೆ ಪದವಿಗೆ ಪ್ರವೇಶ ಪಡೆದಾಗಲೇ ನನ್ನ ಅಪ್ಪ ಹೇಳಿದ್ದರು. ಮಗಳೇ ಬಿಎಸ್ಸಿಯಲ್ಲಿ ಪ್ರಥಮ ಬಂದರೆ ನನಿಗೆ ೧೬ ಚಿನ್ನದ ಪದಕ ಸಿಗುತ್ತವೆ. ಈ ಅವಕಾಶ ಬಿಡಬೇಡ ಎಂದಿದ್ದರು. ನನ್ನ ಅಕ್ಕ ನೀನು ಆ ಗೋಲ್ಡ್ ಪಡೆಯದಿದ್ದರೆ ನಿನ್ನ ಸ್ಥಾನದಲ್ಲಿ ಬೇರೊಬ್ಬರು ಅದನ್ನು ಪಡೆಯುತ್ತಾರೆ. ಹೀಗಾಗಿ ಅದು ನೀನಾನು ಎಂದು ಹೇಳಿದ್ದರು. ಅಪ್ಪನ ಕನಸು ಹಾಗೂ ಅಕ್ಕನ ಪ್ರೇರಣೆಯಿಂದ ಆ ಕನಸು ಇಂದು ನನಸು ಮಾಡಿದ ಹೆಮ್ಮೆ ನನಗಿದೆ.

ಹೀಗಂತ ಹೇಳಿದ್ದು ರಾಜ್ಯದ ಏಕೈಕ ತೋಟಗಾರಿಕೆ ವಿವಿ ಎನ್ನುವ ಹೆಗ್ಗಳಿಕೆ ಇರುವ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ೧೩ನೇ ಘಟಿಕೋತ್ಸವದಲ್ಲಿ ಅತಿ ಹೆಚ್ಚು ೧೬ ಚಿನ್ನದ ಪದಕ ಮುಡಿಗೇರಿಸಿಕೊಂಡ ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಬಿಎಸ್ಸಿ(ಹಾನ್ಸ್) ತೋಟಗಾರಿಕೆ ವಿದ್ಯಾರ್ಥಿನಿ ಅಮುಲ್ಯ ಎಸ್. ಪಾಟೀಲ.
ಹೌದು, ಸೋಮವಾರ ಬಾಗಲಖೋಟೆ ತೋವಿವಿ ಸಭಾಂಗಣದಲ್ಲಿ ನಡೆದಿದ್ದ ೧೩ನೇ ಘಟಿಕೋತ್ಸವದಲ್ಲಿ ಅಮೂಲ್ಯ ಕೇಂದ್ರ ಬಿಂದು ಆಗಿದ್ದಳು. ೨೦೨೩-೨೪ನೇ ಸಾಲಿನ ಬಿಸ್ಸಿ ತೋಟಗಾರಿಕೆಯಲ್ಲಿ ಶೇ.೯೩.೬೦ ಅಂಕ ಪಡೆದು ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಭರ್ತಿ ೧೬ ಚಿನ್ನದ ಪದಕ ಬಾಚಿಕೊಂಡಿದ್ದರು.

ಈ ವೇಳೆ ತಮ್ಮ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಅಮೂಲ್ಯ, ನನ್ನ ಈ ಯಶಸ್ಸಿಗೆ ಅಪ್ಪ-ಅವ್ವ ನನಗೆ ಬೆಂಗಾವಲು ಆಗಿದ್ದರೆ, ವೈದ್ಯೆ ಆಗಿರುವ ನನ್ನಕ್ಕ ಡಾ.ಐಶ್ವರ್ಯ ಪ್ರೇರಣಾದಾಯಕ ನುಡಿಗಳು ಹಾಗೂ ಅಜ್ಜ-ಅಜ್ಜಿ, ಮಾಮಾ, ಮಾಮಿ ಅವರ ಪ್ರೋತ್ಸಾಹವೇ ಕಾರಣ ಎಂದರು.
ಸದ್ಯ ಬೆಂಗಳೂರಲ್ಲಿ ಎಂಎಸ್ಸಿ ಮಾಡುತ್ತಿದ್ದೇನೆ. ಸ್ನಾತಕೋತ್ತರ ಪದವಿ ಮುಗಿದ ಬಳಿಕ ಯುಪಿಎಸ್‌ಸಿ ಪರೀಕ್ಷೆ ಪಾಸುವ ಮಾಡುವ ಕನಸು ಬಿಚ್ಚಿಟ್ಟಳು. ಜೀವನದಲ್ಲಿ ಮುಂದೆ ಬರಬೇಕಾದರೆ ಕಠಿಣ ಪರಿಶ್ರಮ ಪಡಬೇಕು. ಅದುವೆ ನಾವು ಅಂದುಕೊಂಡಿದ್ದನ್ನು ಸಾಽಸಲು ಇರುವ ಮಾರ್ಗ ಎಂದು ಕಿರಿಯ ವಿದ್ಯಾರ್ಥಿ ಮಿತ್ರರಿಗೆ ಸಲಹೆ ನೀಡಿದರು.

ಇನ್ನು ಅಮೂಲ್ಯ ಅವರ ತಂದೆ ಡಾ.ಸಂಗಪ್ಪ ಪಾಟೀಲ ಬೀದರ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಡೀನ್ ಆಗಿದ್ದರೆ ತಾಯಿ ಸವಿತಾ ಅವರು ಬೀದರನ ಮುನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿದ್ದಾರೆ. ಮನೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ಇರುವುದು ಸಹ ಅಮೂಲ್ಯ ಎಂದಿಗೂ ಹೆಚ್ಚಿನ ಸಹಕಾರ ಆಗಿದೆ ಎನ್ನುತ್ತಾರೆ.

ಅಮೂಲ್ಯ ಪಾಟೀಲ ಅವರು ೧೬ ಚಿನ್ನದ ಪದಕಗಳ ಜೊತೆಗೆ ಇಡೀ ವಿವಿಗೆ ಪ್ರಥಮ ಸ್ಥಾನ ಪಡೆದಿದ್ದರಿಂದ ಅವರ ತಂದೆ ಡಾ.ಸಂಗಪ್ಪ ಪಾಟೀಲ ಅವರು ಗದ್ಗದಿತರಾದರು. ನನಗೆ ಇರುವ ಎರಡು ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದಿದ್ದಾರೆ. ಮೂಲತಃ ಕಲಬುರಗಿ ಮೂಲದ ನನ್ನದು ಕೃಷಿ ಕುಟುಂಬ. ನಮ್ಮ ಕುಟುಂಬದಲ್ಲಿ ನಾನು ಮೊದಲು ಸರ್ಕಾರಿ ನೌಕರಿಗೆ ಸೇರಿದ್ದು. ಮಗಳಿಗೆ ಸರ್ಕಾರಿ ನೌಕರಿ ಸಿಗದಿದ್ದರೂ ನಮಗೆ ಇರುವ ೩೫ ಎಕರೆ ಜಮೀನಿನಲ್ಲಿ ಕಾಯಕ ಮಾಡಿ, ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂದರೆ, ಇನ್ನು ತಾಯಿ ಸವಿತಾ ಅವರು ಮಗಳ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿ, ಪಾಲಕರ ಪ್ರೋತ್ಸಾಹ ಇದ್ದೆ ಇರುತ್ತದೆ. ಆದರೆ, ಅಮೂಲ್ಯ ಅವಳಲ್ಲಿ ಸಾಧಿಸುವ ಛಲ ಇದ್ದಿದ್ದಕ್ಕೆ ಇದೆಲ್ಲ ಸಾಧ್ಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net