

ಬೇಲೂರು: ಪಟ್ಟಣದ ಟಿಪ್ಪುನಗರದ ಪುರಿಭಟ್ಟಿ ಬೀದಿಯಲ್ಲಿನ ಅಂಗನವಾಡಿ ಕೇಂದ್ರಕ್ಕೆ ಹೊಂದಿಕೊಂಡಂತಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್‌ನಿಂದ ಯಾವುದೇ ಅವಘಡ ಸಂಭವಿಸುವ ಮುನ್ನ ಸೆಸ್ಕ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಪುರಸಭೆ ಅಧಿಕಾರಿಗಳು ಇಲ್ಲಿನ ವಿದ್ಯುತ್ ಪರಿವರ್ತಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಪಾಲಕರು ಹಾಗೂ ಸ್ಥಳೀಯರ ಆಗ್ರಹವಾಗಿದೆ.
ಬೇಲೂರು ಪುರಸಭೆ ವ್ಯಾಪ್ತಿಯ 23ನೇ ವಾರ್ಡಿನ ಟಿಪ್ಪುನಗರದ ಪುರಿಭಟ್ಟಿ ಬೀದಿಯಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ಮನೆಗೆ ಹೊಂದಿಕೊಂಡಂತೆ ವಿದ್ಯುತ್ ಪರಿವರ್ತಕವಿದೆ. ಈಗಾಗಲೇ ಇದರಲ್ಲಿ ಸಾಕಷ್ಟು ಸಾರಿ ಬೆಂಕಿ ಹೊತ್ತಿ ಉರಿದಿದೆ. ಮಳೆಗಾಲದ ಸಂದರ್ಭದಲ್ಲಂತೂ ಹೇಳತೀರದಾಗಿದೆ. ನೀರು ಅಂಗನವಾಡಿ ಕೇಂದ್ರದ ಮುಂಭಾಗದಲ್ಲೆ ನಿಲ್ಲುವುದರಿಂದ ಕೆಲ ಸಂದರ್ಭ ವಿದ್ಯುತ್ ಪ್ರವಹಿಸಿದ ಘಟನೆಗಳು ನಡೆದಿದೆ. ಅಂಗನವಾಡಿಗೆ ಬಹುತೇಕ ಚಿಕ್ಕ ಮಕ್ಕಳೇ ಬರುವುದರಿಂದ ಎಲ್ಲಿ ಏನಾದರೂ ಅನಾಹುತ ಸಂಭವಿಸುತ್ತದೆಯೋ ಎಂಬ ಆತಂಕ ಹಾಗೂ ಜೀವ ಭಯದಲ್ಲೆ ಮಕ್ಕಳನ್ನು ಪಾಲಕರು ಕಳುಹಿಸುವಂತಾಗಿದೆ.
ಅಂಗನವಾಡಿ ಕೇಂದ್ರದೊಳಗೆ ಮತ್ತು ಹೊರ ಹೋಗಬೇಕೆಂದರೆ ಪರಿವರ್ತಕದ ಪಕ್ಕದಲ್ಲೆ ಹೋಗಬೇಕಿದೆ. ಇದೇ ಪರಿವರ್ತಕದಿಂದ ಇಲ್ಲಿನ ಪುರಿಭಟ್ಟಿಗಳಿಗೆ ಹಾಗೂ ಅಕ್ಕಪಕ್ಕದ ಮನೆಗಳಿಗೆ ವಿದ್ಯುತ್ ಸರಬರಾಜಾಗುತ್ತಿದೆ. ಅತಿಯಾದ ಮಳೆಯ ಸಂದರ್ಭದಲ್ಲಂತೂ ಇಲ್ಲಿಗೆ ಮಕ್ಕಳನ್ನು ಕಳುಹಿಸುವುದಕ್ಕೆ ಪಾಲಕರು ಹಿಂದೆ ಮುಂದೆ ನೋಡುತ್ತಾರೆ. ಕೇಂದ್ರದ ಸಿಬ್ಬಂದಿ ಸಹ ಎಚ್ಚರಿಕೆಯಿಂದಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಪರಿವರ್ತಕದ ಬಳಿ ಹಾಗೂ ತಾಗಿಕೊಂಡೇ ಗಿಡಗಂಟಿಗಳು ಬೆಳೆದಿವೆ. ಅದನ್ನು ಸ್ವಚ್ಛ ಮಾಡಬೇಕೆಂದರೂ ಸಾಧ್ಯವಾಗುತ್ತಿಲ್ಲ. ಇಷ್ಟೆಲ್ಲ ಅವಾಂತರವಿದ್ದರೂ ಸಂಬಂಧಿಸಿದವರು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಇಲ್ಲಿನ ಅಂಗನವಾಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಮಕ್ಕಳು ಜೀವ ಭಯದಲ್ಲೇ ಕಾಲದೂಡುವಂತಾಗಿದೆ. ಆದ್ದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಇಲ್ಲಿನ ವಿದ್ಯುತ್ ಪರಿವರ್ತಕವನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸುವಂತೆ 23ನೇ ವಾರ್ಡಿನ ಸಾರ್ವಜನಿಕರು, ಅಕ್ಕಪಕ್ಕದ ಮನೆ ಮಾಲೀಕರು, ಅಂಗನವಾಡಿ ಕೇಂದ್ರದ ಕಾರ್ಯಕರ್ತರು ಸೆಸ್ಕ್ ಅಧಿಕಾರಿ ಮತ್ತು ಸಿಬ್ಬಂದಿಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಲಿಖಿತವಾಗಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಸ್ಥಳೀಯ ಸೆಸ್ಕ್ ಅಧಿಕಾರಿಗಳನ್ನು ಕೇಳಿದರೆ ಪರಿವರ್ತಕವನ್ನು ಸ್ಥಳಾಂತರಿಸುತ್ತೇವೆ. ನಮಗೆ ಸ್ಥಳ ಎಲ್ಲಿದೆ ಎಂಬುದನ್ನು ತೋರಿಸಿ ಎನ್ನುತ್ತಾರೆಯೇ ಹೊರತು ಇಲ್ಲಿಯವರೆಗೂ ಇದನ್ನು ಕಾರ್ಯಗತಕ್ಕೆ ತಂದಿಲ್ಲ. ಆದ್ದರಿಂದ ಈಗಲಾದರೂ ಸೆಸ್ಕ್ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು ಮಕ್ಕಳ ಸುರಕ್ಷತೆಯನ್ನು ಗಮನಿಸಿ ಇಲ್ಲಿನ ಅಂಗನವಾಡಿ ಕೇಂದ್ರದ ಸಮೀಪ ಯಾವುದೇ ಅವಘಡ ಸಂಭವಿಸುವ ಮುನ್ನವೇ ವಿದ್ಯುತ್ ಪರಿವರ್ತಕವನ್ನು ಬೇರೆಡೆಗೆ ಸ್ಥಳಾಂತರಿಸಿ ಮಕ್ಕಳು ಮತ್ತು ನಾಗರಿಕರು ನೆಮ್ಮದಿಯಾಗಿ ಓಡಾಡಲು ಅನುಕೂಲ ಕಲ್ಪಿಸಬೇಕೆನ್ನುವುದು ಸಾರ್ವಜನಿಕರು, ಪಾಲಕರು ಹಾಗೂ ಅಂಗನವಾಡಿ ಕೇಂದ್ರದ ಸಿಬ್ಬಂದಿಯ ಆಗ್ರಹವಾಗಿದೆ.