ಅಪರಾಧಮುಕ್ತ ಸಮಾಜದ ನಿರ್ಮಾಣಕ್ಕೆ ಬದ್ಧರಾಗಿ

11. vpt 1
Published on

ವಿರಾಜಪೇಟೆ: ಅಪರಾಧಮುಕ್ತ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಕಾನೂನಿನ ನಿಯಮಗಳನ್ನು ಪಾಲಿಸುವ ಜತೆಗೆ ಅಪರಾಧಮುಕ್ತ ಸಮಾಜ ನಿರ್ಮಿಸಲು ಬದ್ಧರಾಗಿ ಎಂದು ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಸಲಹೆ ನೀಡಿದರು.

ಅವರು ವಿರಾಜಪೇಟೆ ಪಟ್ಟಣದ ಸೇಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ, ವಿರಾಜಪೇಟೆ ಪೊಲೀಸ್ ಠಾಣೆ ಹಾಗೂ ಪದವಿ ಕಾಲೇಜಿನ ಐಕ್ಯೂಎಸಿ, ಎನ್ ಎಸ್‌ಎಸ್, ಯುವ ರೆಡ್‌ಕ್ರಾಸ್ ಘಟಕದ ಸಹಯೋಗದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಚಾರ ನಿಯಮಗಳು ಹಾಗೂ ಮಾದಕ ವಸ್ತು ಸೇವನೆಯ ಪರಿಣಾಮಗಳು, ಕಾಯ್ದೆಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಯಥಾವತ್ತಾಗಿ ಪಾಲಿಸಬೇಕು. ವಾಹನ ಚಾಲನೆಯ ವೇಳೆಯಲ್ಲಿ ಸಂಬಂಧಿತ ದಾಖಲೆಗಳು ಕಡ್ಡಾಯವಾಗಿ ಇರಬೇಕು ಎಂದರು. ಮಾದಕ ವಸ್ತುಗಳು ಮನುಷ್ಯನ ಜೀವನವನ್ನು ಹಾಳು ಮಾಡುತ್ತವೆ. ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆಯ ದಾಸರಾಗದೇ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಸಂಚಾರ ನಿಯಮ ಉಲ್ಲಂಘನೆಯ ಕಾಯ್ದೆಗಳು ಹಾಗೂ ಮಾದಕ ವಸ್ತು ಸೇವನೆಯ ಪರಿಣಾಮ, ಶಿಕ್ಷೆಗಳ ಕುರಿತು ಸಾಕ್ಷ್ಯ ಚಿತ್ರದ ಸಮೇತ ವಿವರಿಸಿ ಜಾಗೃತಿ ಮೂಡಿಸಿದರು.

ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಾದ ಪ್ರಮೋದ್ ಮಾತನಾಡಿ, ಕಾನೂನು ಸುವ್ಯವಸ್ಥೆಗೆ ಎಲ್ಲರೂ ಬದ್ಧರಾಗಿರಬೇಕು. ವಿದ್ಯಾರ್ಥಿ ಹಂತದಿಂದಲೇ ಉತ್ತಮ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ರೂಪಿಸಿಕೊಳ್ಳಬೇಕು. ಜತೆಗೆ ಕಾನೂನಿನ ಪಾಠವನ್ನು ಸಮಾಜಕ್ಕೆ ತಿಳಿ ಹೇಳಬೇಕು. ಅಪರಾಧ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು, ಉತ್ತಮ ಶಿಕ್ಷಣ ಪಡೆಯುವ ಜತೆಗೆ ಉತ್ತಮ ಉದ್ಯೋಗವನ್ನು ಪಡೆದುಕೊಂಡು ಪಾಲಕರಿಗೂ, ವಿದ್ಯಾಸಂಸ್ಥೆಗೂ ಕೀರ್ತಿಯನ್ನು ತನ್ನಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮುಖ್ಯ. ಸಂವಿಧಾನವನ್ನು ಅರಿಯಬೇಕು, ಕಾನೂನಿನ ಅರಿವಾದಲ್ಲಿ ಅಪರಾಧಗಳು ನಡೆಯಲು ಸಾಧ್ಯವಿಲ್ಲ ಎಂದರು. ವಿರಾಜಪೇಟೆ ಗ್ರಾಮಾಂತರ ಠಾಣೆಯ ಠಾಣಾಧಿಕಾರಿಗಳಾದ ಲತಾ, ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮಾ, ಎನ್‌ಎಸ್ ಎಸ್ ಅಧಿಕಾರಿ ಬಿ.ಎನ್.ಶಾಂತಿಭೂಷಣ್, ಯುವ ರೆಡ್‌ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೇಸ್ ಅವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಪೊಲೀಸ್ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net