ಅಪಘಾತದಲ್ಲಿ ಮೊಪೆಡ್ ಸವಾರ ಸಾವು

Published on

ಕೆ.ಆರ್.ಪೇಟೆ

ಕೆ.ಆರ್.ಪೇಟೆ-ಮೈಸೂರು ಮುಖ್ಯ ರಸ್ತೆಯ ಅಗಸರಹಳ್ಳಿ ಗ್ರಾಮದ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೊಪೆಡ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕೆ.ಆರ್.ಪೇಟೆ ತಾಲೂಕು ಶೀಳನೆರೆ ಹೋಬಳಿ ಭೈರಾಪುರ ಗ್ರಾಮದ ನಿವಾಸಿ ದುಬೈ ವೆಂಕಟೇಗೌಡ(75) ಮೃತರು.

ವೆಂಕಟೇಗೌಡ ಕೆಲಸದ ನಿಮಿತ್ತ ಕೆ.ಆರ್.ಪೇಟೆ ಪಟ್ಟಣಕ್ಕೆ ತಮ್ಮ ಮೊಪೆಡ್‌ನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಅತಿ ವೇಗವಾಗಿ ಮೈಸೂರಿನಿಂದ ಕೆ.ಆರ್.ಪೇಟೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಅಗಸರಹಳ್ಳಿ ಗ್ರಾಮದ ಬಳಿ ಮೈಸೂರು-ಕೆ.ಆರ್.ಪೇಟೆ ಮುಖ್ಯ ರಸ್ತೆಯಲ್ಲಿ ವೆಂಕಟೇಗೌಡರ ಮೊಪೆಡ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆಯಿತು. ಮೊಪೆಡ್‌ನಿಂದ ಕೆಳಕ್ಕೆ ಬಿದ್ದ ವೆಂಕಟೇಗೌಡ ಮೇಲೆ ಬಸ್‌ನ ಚಕ್ರಗಳು ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು.

ಸ್ಥಳಕ್ಕೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಆನಂದೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಖಾಸಗಿ ಬಸ್ ಮತ್ತು ಚಾಲಕನನ್ನು ವಶಕ್ಕೆ ಪಡೆದರು. ಶವವನ್ನು ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು.

ವೆಂಕಟೇಗೌಡ ಪತ್ನಿ ಸರೋಜಮ್ಮ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net