ಅಪಘಾತದಲ್ಲಿ ಮೂವರ ಸಾವು

15 hkr 01.b
Published on

ಹಿರೇಕೆರೂರ: ರಸ್ತೆ ಬದಿಯ ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ ಕಾರು ಹಾಯ್ದಿದ್ದರಿಂದ ಇಬ್ಬರು ಬಾಲಕಿಯರು ಮತ್ತು ಕಾರು ಚಾಲನೆ ಮಾಡುತ್ತಿದ್ದ ಮುಖ್ಯಶಿಕ್ಷಕ ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಸುತ್ತಕೋಟೆ ಗ್ರಾಮದ ಸಮೀಪ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ತಾಲೂಕಿನ ಆಪಿನಕೊಪ್ಪ ಗ್ರಾಮದ ಯಶೋದಾ ಅಶೋಕ ತಳವಾರ (10), ಶಾಲಿನಿ ಅಶೋಕ ತಳವಾರ (9) ಹಾಗೂ ಕಾರು ಚಾಲನೆ ಮಾಡುತ್ತಿದ್ದ ಮುಖ್ಯಶಿಕ್ಷಕ ಜಯಪ್ರಕಾಶ ಆರ್.ಕೆ. (50) ಮೃತಪಟ್ಟ ದುರ್ದೈವಿಗಳು. ಕಾರಿನಲ್ಲಿದ್ದ ಜಯಪ್ರಕಾಶ ಅವರ ಪತ್ನಿ ಗಿರಿಜಮ್ಮ ಕೂಲಮಿ ಹಾಗೂ ಮತ್ತೊಬ್ಬ ಮಹಿಳೆ ಸುಶೀಲಮ್ಮ ಮಲ್ಲೇಶಪ್ಪ ಕೊಟ್ರಳ್ಳಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ರಾಣೆಬೆನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯ ವಿವರ: ಹಿರೇಕೆರೂರ ತಾಲೂಕಿನ ಸುತ್ತಕೋಟಿ ಗ್ರಾಮದ ಮಂಗಳಾ ತಳವಾರ ಅವರನ್ನು ತಾಲೂಕಿನ ಆಪಿನಕೊಪ್ಪ ಗ್ರಾಮದ ಅಶೋಕ ಎಂಬುವವರೊಂದಿಗೆ ವಿವಾಹ ಮಾಡಿಕೊಡಲಾಗಿದೆ. ಇವರಿಗೆ ಮೂವರು ಪುತ್ರಿಯರು. ಸುತ್ತಕೋಟಿಗೆ ತಾಯಿಯೊಂದಿಗೆ ಬಂದಿದ್ದ ಬಾಲಕಿಯರು ಮಂಗಳವಾರ ಜಮೀನಿನಲ್ಲಿ ಉಪಾಹಾರ ಸೇವಿಸಿ, ರಸ್ತೆ ಬದಿ ಇದ್ದ ಮರದ ಕೆಳಗೆ ಆಟವಾಡುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಆಟವಾಡುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಹರಿದು ನಂತರ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕಿಯರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಆಪಿನಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಯಶೋದಾ ಮೂರು ಹಾಗೂ ಶಾಲಿನಿ ಎರಡನೇ ತರಗತಿ ಓದುತ್ತಿದ್ದರು.

ಜೀವನದ ಪಾತ್ರ ಮುಗಿಸಿದ ಮೇಷ್ಟ್ರು

ತಾಲೂಕಿನ ಹೊಂಕಣದಲ್ಲಿ ಶ್ರೀ ಗುಬ್ಬಿ ನಂಜುಡೇಶ್ವರ ಜಾತ್ರೆ ನಿಮಿತ್ತ ಸೋಮವಾರ ರಾತ್ರಿ ‘ಗುಬ್ಬಿ ನಂಜುಂಡೇಶ್ವರ ಮಹಾತ್ಮೆ’ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ನಾಟಕದಲ್ಲಿ ಅಜ್ಜನ ಪಾತ್ರ ನಿರ್ವಹಿಸಿದ್ದ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದವರಾದ ಹಾಲಿ ರಾಣೆಬೆನ್ನೂರಿನ ನಾಗನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾಗಿದ್ದ ಜಯಪ್ರಕಾಶ ಕೂಲಮಿ ಅವರು ನಾಟಕ ಮುಗಿಸಿಕೊಂಡು ಪತ್ನಿ ಗಿರಿಜಮ್ಮ ಹಾಗೂ ಸುಶೀಲಮ್ಮ ಕೊಟ್ರಳ್ಳಿ ಎಂಬುವರೊಂದಿಗೆ ಕಾರು ಚಲಾಯಿಸಿಕೊಂಡು ರಾಣೆಬೆನ್ನೂರಿಗೆ ತೆರಳುತ್ತಿದ್ದರು. ಈ ವೇಳೆ ಸುತ್ತಕೋಟಿ ಬಳಿ ಸಂಭವಿಸಿದ ಅವಘಡದಲ್ಲಿ ಜಯಪ್ರಕಾಶ ಗಂಭೀರವಾಗಿ ಗಾಯಗೊಂಡಿದ್ದರು ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಇನ್ನು ಇವರ ಪತ್ನಿ ಗಿರಿಜಮ್ಮ ಹಾಗೂ ಸುಶೀಲಮ್ಮ ಎಂಬುವರು ಕೂಡ ಗಂಭಿರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net