

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ರಾಮದುರ್ಗ ಹೊರವಲಯದ ಮುಳ್ಳೂರ ಘಾಟ್‌ನಲ್ಲಿ ಭಾನುವಾರ ಸಂಜೆ ನಡೆದಿದೆ.
ರಾಮದುರ್ಗ ಪಡಕೋಟಿ ಓಣಿ ನಿವಾಸಿ ವಿಜಯಕುಮಾರ ಘೋಡಬೋಲೆ (54) ಹಾಗೂ ಗೂಡ್ಸ್ ವಾಹನ ಚಾಲಕ ಕಲಬುರಗಿ ಪಟ್ಟಣದ ಶಹಾಬಜಾರ್ ನಿವಾಸಿ ಅನಿಲ್ ಬಿರಾದಾರ (23) ಮೃತರು. ಮೃತ ವಿಜಯಕುಮಾರ ಮುಳ್ಳೂರ ಘಾಟ್‌ನ ಶಿವನ ಮೂರ್ತಿ ದೇವಸ್ಥಾನದ ಅರ್ಚಕರಾಗಿದ್ದಾರೆ.
ನಿತ್ಯ ಬೆಳಗ್ಗೆ ಮತ್ತು ಸಂಜೆ ಮನೆಯಿಂದ ಶಿವಲಿಂಗದ ಪೂಜೆಗೆ ಹೋಗಿ ಬರುತ್ತಿದ್ದರು. ಎಂದಿನಂತೆ ಸಂಜೆ ಪೂಜೆಗೆ ಹೋಗುವಾಗ ಎದುರಿನಿಂದ ಬಂದ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಗೂಡ್ಸ್‌ನಲ್ಲಿದ್ದ ಯಮನೂರೇಶ ಕಬಾಡಿ ಮತ್ತು ದರ್ಶನ ಎಂಬುವವರು ಗಾಯಗೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ರಾಮದುರ್ಗ ಠಾಣೆ ಪೊಲೀಸರು ತಿಳಿಸಿದ್ದಾರೆ.