ಅನ್ನೋತ್ಸವ ಉದ್ಘಾಟನೆ ಇಂದು

02
Published on

ಬೆಳಗಾವಿ: ಬೆಳಗಾವಿಯ ಸಾವಗಾಂವ ರಸ್ತೆಯ ಅಂಗಡಿ ಕಾಲೇಜು ಮೈದಾನದಲ್ಲಿ ಜ.3ರಂದು ಸಂಜೆ 5.30ಕ್ಕೆ ಬೆಳಗಾವಿ ರೋಟರಿ ಕ್ಲಬ್ನ ರೋಟರಿ ಅನ್ನೋತ್ಸವ-2025ರ ಮೆಗಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಮಾಜಿ ಸಂಸದೆ, ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಮಂಗಲ ಅಂಗಡಿ ಅವರು ಕಾರ್ಯಕ್ರಮ ಉದ್ಘಾಟನೆ ನೆರವೇರಿಸುವರು.

ಡಾ. ಸ್ಪೂರ್ತಿ ಅಂಗಡಿ ಮತ್ತು ರೋಟರಿ ಜಿಲ್ಲಾ ಗವರ್ನರ್ ಶರದ ಪೈ ಅವರು ಈ ಸಮಾರಂಭದಲ್ಲಿ ಭಾಗವಹಿಸುವರು. ರೋಟರಿ ಕ್ಲಬ್ ಆಫ್ ಬೆಳಗಾವಿಯ ಅಧ್ಯಕ್ಷ ಸುಹಾಸ ಚಂದಕ, ಅಕ್ಷಯ ಕುಲಕರ್ಣಿ, ಶೈಲೇಶ್ ಮಾಂಗಲೆ, ಕಾರ್ಯದರ್ಶಿ ಮನೀಷಾ ಹೆರೆಕರ ಮತ್ತು ಬೆಳಗಾವಿಯ ರೋಟರಿ ಕ್ಲಬ್ ಸದಸ್ಯರು ಭಾಗವಹಿಸಲಿದ್ದಾರೆ.

ಜ.3ರಿಂದ ಜ.14ರ ವರೆಗೆ ಅನ್ನೋತ್ಸವ ಆಯೋಜಿಸಲಾಗಿದೆ. ಕಾಶ್ಮೀರದಿಂದ ಜೈಪುರ, ಗೋವಾ, ಕೊಲ್ಹಾಪುರ, ಸಾತಾರಾ, ಪುಣೆ, ನವದೆಹಲಿಯ ಪ್ರಸಿದ್ಧ ಆಹಾರ ಮಳಿಗೆಗಳು ಸೇರಿ ದೇಶದ ವಿವಿಧ ಭಾಗಗಳಿಂದ 200ಕ್ಕೂ ಅಧಿಕ ಮಳಿಗೆಗಳು ಈ ಉತ್ಸವದಲ್ಲಿ ಭಾಗವಹಿಸಲಿವೆ. ಈ ವರ್ಷ 1.20 ಲಕ್ಷಕ್ಕೂ ಹೆಚ್ಚು ಜನರು ಅನ್ನೋತ್ಸವಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಅನ್ನೋತ್ಸವ 2025 ರ ವೈಶಿಷ್ಟ್ಯಗಳು: ಒಟ್ಟು 186 ಮಳಿಗೆಗಳಿವೆ. ಇದರಲ್ಲಿ 114 ಆಹಾರ ಮಳಿಗೆಗಳು ಇದ್ದು, ಈ ಪೈಕಿ 63 ಮಾಂಸಾಹಾರಿ ಮತ್ತು 51 ಸಸ್ಯಾಹಾರಿ ಮಳಿಗೆಗಳಿವೆ. 72 ಗ್ರಾಹಕೋತ್ಪನ್ನ ಮಳಿಗೆಗಳು, ವಿವಿಧ ವಸ್ತುಗಳನ್ನು ಪ್ರದರ್ಶಿಸಲಿವೆ. ಆಹಾರ ಮಳಿಗೆಗಳಲ್ಲಿ ವಿವಿಧ ಭಾರತೀಯ ಮತ್ತು ಪಾಶ್ಚಿಮಾತ್ಯ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರಗಳು ಇರಲಿವೆ. ಮಾಂಸಾಹಾರಿ ಮತ್ತು ಸಸ್ಯಾಹಾರಿ ಆಹಾರದಲ್ಲಿ ಥಾಲಿ, ಮೀನು, ರುಚಿಕರವಾದ ಬಿರಿಯಾನಿ, ಕಬಾಬ್ ಮತ್ತು ಇನ್ನೂ ಅನೇಕ ತರಹದ ಆಹಾರ ಇರಲಿವೆ.

ಅಮ್ಯೂಸ್ಮೆಂಟ್ ಪಾರ್ಕ್ ಹನ್ನೆರಡು ದಿನಗಳವರೆಗೆ ಮಕ್ಕಳನ್ನು ರಂಜಿಸಲಿದೆ. ಪ್ರತಿದಿನ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮ ಪ್ರಸ್ತುತ ಪಡಿಸಲಾಗುತ್ತದೆ. ಅವುಗಳಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ, ಬಾಲಿವುಡ್ ನೈಟ್, ಶಹನ್ಶಾ ಬಚ್ಚನ್ ನೈಟ್, ಮಿಸ್ ಬೆಳಗಾವಿ ಸ್ಪರ್ಧೆ, ಬೂಗೀ-ವೂಗೀ, ಸೂಫಿ ನೈಟ್, ಅಲಗ್ ರಿದಮ್, ಶಾಂದರ್ ಶ್ರೀಯಾ, ಡಿಸ್ಕೋ ಕಿಂಗ್ ನೈಟ್, ಬಾಲಿವುಡ್ ಮಿಕ್ಸಾಲಜಿ ಸೇರಿವೆ. ನಾಗರಿಕರು ನೀಡಿದ ಸಲಹೆ ಗಮನದಲ್ಲಿಟ್ಟುಕೊಂಡು ಈ ವರ್ಷ ವಾಹನ ನಿಲುಗಡೆಗೆ ಸೌಲಭ್ಯ ಕಲ್ಪಿಸಲಾಗಿದೆ.

ಈವರೆಗೆ ರೋಟರಿ ಕ್ಲಬ್ನಿಂದ ಶಾಲೆ, ಶೌಚಗೃಹ, ಆಂಬುಲೆನ್ಸ್, ನೇತ್ರ ಬ್ಯಾಂಕ್, ಸ್ಕಿನ್ ಬ್ಯಾಂಕ್, ಡಯಾಲಿಸಿಸ್ ಸೆಂಟರ್, ಪೋಲಿಯೋ ಲಸಿಕೆಗಾಗಿ ರೆಫ್ರಿಜರೇಟರ್, ಆರ್ಟಿಫಿಷಿಯಲ್ ಲಿಂಬ್ಸ್ಗಾಗಿ ಆರ್ಥಿಕ ಸಹಾಯ, ಈ ಬಾರಿಯ ಆಹಾರೋತ್ಸವದ ಹಣವನ್ನು ಸಂಪೂರ್ಣವಾಗಿ ಬೆಳಗಾವಿಗೆ ವಿನಿಯೋಗಿಸಲಾಗುವುದು. ಆದ್ದರಿಂದ ಅನೇಕ ಜನೋಪಕಾರಿ ಚಟುವಟಿಕೆಗಳು ಜಾರಿಯಾಗಲಿವೆ. ಬೆಳಗಾವಿ ಮತ್ತು ಸುತ್ತಲಿನ ತಿಂಡಿ-ತಿನಿಸುಗಳು ಒಂದೇ ಸ್ಥಳದಲ್ಲಿ ಆಹಾರ ಮತ್ತು ಮನರಂಜನೆಯ ನೈಜತೆ ಆನಂದಿಸಲು ಇದು ಅಪರೂಪದ ಅವಕಾಶ. ಬೆಳಗಾವಿ ಮತ್ತು ಸುತ್ತಲಿನ ಎಲ್ಲ ನಾಗರಿಕರು ಈ ಅವಕಾಶವನ್ನು ಮನರಂಜನೆಯೊಂದಿಗೆ ಆಸ್ವಾದಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net