

ಕಾರವಾರ: ಊಟ ಸರಿ ಇಲ್ಲ ಎಂಬ ಕಾರಣ ನೀಡಿ ವಸತಿ ನಿಲಯದ ಮಕ್ಕಳು ಊಟದ ಬಟ್ಟಲ ಜತೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ನಗರದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿರುವ 60 ಮಕ್ಕಳಲ್ಲಿ ಸುಮಾರು 20 ಮಕ್ಕಳು ಮಂಗಳವಾರ ರಾತ್ರಿ ಹಠಾತ್ ಪ್ರತಿಭಟನೆ ನಡೆಸಿದರು. ಊಟದ ಬಟ್ಟಲು ಹಿಡಿದು ಹಾಸ್ಟೆಲ್ ಎದುರಿನ ರಸ್ತೆಯಲ್ಲೇ ಕುಳಿತು ಘೋಷಣೆ ಕೂಗಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಮಕ್ಕಳು ಊಟ ರುಚಿ ಇಲ್ಲ. ಮೀನನ್ನು ಸರಿಯಾಗಿ ತೊಳೆಯುವುದಿಲ್ಲ. ಕಿಟಕಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೊಳೆತ ಬಾಳೆಹಣ್ಣು ನೀಡಲಾಗುತ್ತದೆ ಎಂಬ ಆರೋಪ ಮಾಡಿದರು. ಈ ನಡುವೆ ಇನ್ನು ಕೆಲ ಮಕ್ಕಳು ವ್ಯವಸ್ಥೆ ಸಮರ್ಪಕವಾಗಿದೆ ಎಂದೂ ಹೇಳಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು. ವಿದ್ಯಾರ್ಥಿಗಳಿಗೆ ಸೌಲಭ್ಯ ವಿತರಿಸಲಾಗುವುದು ಎಂದು ಅಜ್ಜಪ್ಪ ಸ್ಪಷ್ಟಪಡಿಸಿದರು.