ಅನುದಾನ ನೀಡಲು ಶಾಸಕ, ಸಂಸದರಿಗೆ ಮನವಿ

18gkn2-a-
Published on

ವಿಜಯವಾಣಿ ಸುದ್ದಿಜಾಲ ಗೋಕರ್ಣ: ಇಲ್ಲಿನ ರಥಬೀದಿಯಿಂದ ಸಮುದ್ರ ತೀರದವರೆಗಿನ 1.5 ಕಿ.ಮೀ. ಉದ್ದದ ಮುಖ್ಯ ಹಳ್ಳವನ್ನು 15 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತಲಾಗುವುದು ಎಂದು ಪಂಚಾಯಿತಿ ಉಪಾಧ್ಯಕ್ಷ ಶೇಖರ ನಾಯ್ಕ ಹೇಳಿದರು.

ಇಲ್ಲಿನ ಹಳ್ಳ ಹೂಳೆತ್ತುವ ಕಾಮಗಾರಿಗೆ ಬುಧವಾರ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಅನೇಕ ದಶಕಗಳಿಂದ ಈ ಹಳ್ಳದ ಹೂಳೆತ್ತದ್ದರಿಂದ ಮಳೆಗಾಲದಲ್ಲಿ ಮಹಾಬಲೇಶ್ವರ ಮಂದಿರ ಗರ್ಭ ಗುಡಿಗೆ ನೀರು ನುಗ್ಗುವ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪಂಚಾಯಿತಿ ಕಾಮಗಾರಿಗೆ ಚಾಲನೆ ನೀಡಿದೆ. ಹಳ್ಳವನ್ನು ಪೂರ್ಣವಾಗಿ ಸ್ವಚ್ಛ ಮಾಡಲು ಇನ್ನೂ ಹೆಚ್ಚಿನ ಹಣದ ಅಗತ್ಯವಿದೆ. ಇದನ್ನು ಒದಗಿಸಲು ಸ್ಥಳೀಯ ಶಾಸಕ ದಿನಕರ ಶೆಟ್ಟಿ ಮತ್ತು ಸಂಸದ ಅನಂತಕುಮಾರ ಹೆಗಡೆ ಅವರಿಗೆ ಮನವಿ ಸಲ್ಲಿಸುವುದಾಗಿ ಶೇಖರ ನಾಯ್ಕ ತಿಳಿಸಿದರು.

ಇದಕ್ಕೂ ಮುನ್ನ ತಾಪಂ ಇಒ ಸಿ.ಟಿ. ನಾಯ್ಕ ಭೂಮಿ ಪೂಜೆ ನೆರವೇರಿಸಿದರು. ತಾಪಂ ಸದಸ್ಯ ಮಹೇಶ ಶೆಟ್ಟಿ ಮಾತನಾಡಿ, ಅನೇಕ ದಶಕಗಳಿಂದ ಜನರ ಬೇಡಿಕೆಯಾಗಿದ್ದ ಈ ಕಾಮಗಾರಿಗೆ ಪಂಚಾಯಿತಿ ಚಾಲನೆ ನೀಡಿರುವುದಕ್ಕೆ ವ್ಯಾಪಕ ಪ್ರಶಂಸೆ ಕೇಳಿ ಬಂದಿದೆ ಎಂದರು.

ಜಿಪಂ ಇಂಜಿನಿಯರಿಂಗ್ ವಿಭಾಗದ ಆರ್.ಜಿ. ಗುನಗಿ, ಪಿಡಿಒ ವಿನಯಕುಮಾರ, ಕಾರ್ಯದರ್ಶಿ ಶ್ರೀಧರ ಬೋಮ್ಕರ, ಗ್ರಾಪಂ ಸದಸ್ಯರಾದ ಸುಮಿತ್ರಾ ಗೌಡ, ರಮೇಶ ಪ್ರಸಾದ, ಗಣಪತಿ ಗೌಡ, ಪ್ರಭಾಕರ ಪ್ರಸಾದ, ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ರಾಮು ಕೆಂಚನ್, ಹವ್ಯಕ ಬ್ಯಾಂಕ್ ನಿರ್ದೇಶಕ ಲಂಬೋದರ ಸಭಾಹಿತ, ಯಂಗ್​ಸ್ಟಾರ್ ಕ್ಲಬ್ ಅಧ್ಯಕ್ಷ ನಾಗಕುಮಾರ ಗೋಪಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net