ಅನಿಷ್ಠ ಪದ್ಧತಿ ವಿರುದ್ಧ ಹೋರಾಡಿದವರು

bkt-10-2
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಿಸಲಾಯಿತು.
Published on

ಬಾಗಲಕೋಟೆ: ದೇಶದಲ್ಲಿ ತಾಂಡವವಾಡುತ್ತಿದ್ದ ಅನೇಕ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆ ಮಾಡಿ ಸನಾತನ ಧರ್ಮ ಸ್ಥಾಪನೆಗೆ ಕಾರಣರಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟೀಷರ ಅರಸೊತ್ತಿಗೆಯ ಆಡಂಬರದ ಕಾಲದಲ್ಲಿ ಜಾತೀಯತೆ, ಅಸ್ಪೃಷತೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಬಾಲ್ಯವಿವಾಹ, ಗುಲಾಮಗಿರಿ, ಜೀತಪದ್ಧತಿಗಳು ಸೇರಿದಂತೆ ಅನೇಕ ಅನಿಷ್ಠ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ ಸರ್ವರೂ ಸಮಾನರು, ಶಿಕ್ಷಣ ಪಡೆಯುವದು ಪ್ರತಿಯೊಬ್ಬರ ಹಕ್ಕು, ಮಾನವ ಜಾತಿ ಒಂದೇ ಎಂದೂ ಸಾರಿದ ಕ್ರಾಂತಿ ಪುರುಷ ಎಂದರು.
ನಾರಾಯಣ ಗುರುಗಳು ಕೇವಲ ಸಾಮಾಜಿಕ ಚಿಂತಕರಾಗಿರದೇ ವೇದ ಉಪನಿಷತ್ತು, ಯೋಗ, ಆಯುರ್ವೇದವನ್ನು ಬಲ್ಲವರಾಗಿದ್ದರು. ಅವರು ಯಾವುದೇ ಧರ್ಮ ಜಾತಿಗೆ ಸೇರಿದವರಲ್ಲ. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಹಿಂದೂ ಧರ್ಮದ ಏಕತೆಗೆ, ಆಚಾರ, ವಿಚಾರ ಶಿಕ್ಷಣಕ್ಕೆ ಒತ್ತು ನೀಡಿದ ನಾರಾಯಣ ಗುರುಗಳ ಕಾರ್ಯ ಶ್ಲಾಘನೀಯವಾದುದು. ಇಂತಹ ಮಹತ್ವದ ಕಾರ್ಯ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ. ಅವರ ಆದರ್ಶವನ್ನು ಎಲ್ಲರೂ ಪಾಲಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಾತ್ಮರ ಎನಿಸಿಕೊಂಡ 36 ಸಂತ ಮಹಾಂತರ ಜಯಂತಿಗಳನ್ನು ಸರ್ಕಾರ ಆಚರಿಸುತ್ತಿದೆ ಎಂದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿ, ಜಗತ್ತಿನಾದ್ಯಂತ ಅನೇಕ ದುರ್ಘಟನೆಗಳು ನಡೆದರೂ ಭಾರತ ದೇಶ ಶಾಂತಿ, ನೆಮ್ಮದಿ ಇಂದಿರುವದಕ್ಕೆ ನಾರಾಯಣ ಗುರುಗಳಂತ ಮಹಾತ್ಮರ ಅವತರಿಸಿದ ಫಲವಾಗಿದೆ. ಇಂತಹ ಮಹಾತ್ಮರು ಹಾಕಿದ ದಾರಿಯಲ್ಲಿ ಸ್ವಲ್ಪವಾದರೂ ನಡೆದರೆ ಜಯಂತಿ ಆಚರಿಸದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಬಾದಾಮಿ ಕಾಳಿದಾಸ ಕಾಲೇಜಿನ ಉಪಪ್ರಾಚಾರ್ಯ ಮಹಾಂತೇಶ ಈಳಗೇರ ಮಾತನಾಡಿ, ನಾರಾಯಣ ಗುರುಗಳು ಸ್ವತಂತ್ರ ಭಾರತ ಕನಸು ಕಂಡವರು. ಸಿಪಾಯಿ ದಂಗೆ, ವಾಕಮ್ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿಗೆ ಮುನ್ನುಡಿ ಬರೆದವರು. ಕೇರಳದಲ್ಲಿ ಜನಿಸಿದ ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಆದ್ದರಿಂದಲೇ ಕೇರಳದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗಿದ್ದಾರೆ. ಇಂತಹ ಮಹಾತ್ಮರು ಪ್ರಾಥಸ್ಮರಣೀಯರು ಎಂದರು.
ಶಶೀಧರ ಜಿಗಜಿನ್ನಿ ತಂಡದವರಿಂದ ನಾಡಗೀತೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಜಿಲ್ಲಾ ಈಡಿಗ ಸಮುದಾಯದ ಮುಖಂಡರಾದ ಅಶೋಕ ಕರಡಿ, ಮನೋಹರ ಈಳಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net