

ಬೆಟ್ಟದಪುರ: ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಇರಲಿ ಎಂಬ ಉದ್ದೇಶದಿಂದ ಸರ್ಕಾರ ಅನಿಮಿಯಾಮುಕ್ತ ಪೌಷ್ಟಿಕ ಕಾರ್ಯಕ್ರಮ ರೂಪಿಸಿದೆ ಎಂದು ಚಪ್ಪರದಹಳ್ಳಿ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ರವಿ ಹೇಳಿದರು.
ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಅನಿಮಿಯಾಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಆರೋಗ್ಯ ಅನೇಕ ಕಾರಣಗಳಿಂದ ಹದಗೆಟ್ಟು ರೋಗಗಳಿಗೆ ತುತ್ತಾಗುತ್ತಾರೆ. ಕೆಲವು ರೋಗಗಳನ್ನು ಪ್ರಯತ್ನದಿಂದ ತಡೆಗಟ್ಟಲು ಸಾಧ್ಯವಿರುವುದರಿಂದ ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವಿಸಬೇಕು, ನಿಯಮಿತವಾಗಿ ವ್ಯಾಯಾಮ ಮಾಡಬೇಕಿದೆ ಎಂದರು.
ಅನಿಮಿಯಾದಿಂದ ಗ್ರಹಿಕಾ ಶಕ್ತಿ ಕಡಿಮೆಯಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುತ್ತಿದೆ. ಹಿಮೋಗ್ಲೋಬಿನ್ ಕಡಿಮೆಯಾದಾಗ ಅನಿಮಿಯಾ ಶುರುವಾಗುತ್ತೆ. ಇದಕ್ಕೆ ಪೌಷ್ಟಿಕಾಂಶದ ಕೊರತೆಯೇ ಮುಖ್ಯ ಕಾರಣ. ಕಬ್ಬಿಣಾಂಶ ಕೊರತೆಯಿಂದ ಹಿಮೋಗ್ಲೋಬಿನ್ ಕಡಿಮೆಯಾಗುತ್ತದೆ. ಈ ಬಗ್ಗೆ ನಮ್ಮ ಪಾಲಕರು ಕೂಡ ಹೆಚ್ಚು ಕಾಳಜಿವಹಿಸುತ್ತಿಲ್ಲ. ಇದರಿಂದ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಕಡಿಮೆಯಾಗುತ್ತೆ. ಸುಸ್ತು ಆಯಾಸದಿಂದ ಶಕ್ತಿಯೇ ಕುಗ್ಗುತ್ತದೆ. ಹಾಗಾಗಿ ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಹಿಮೋಗ್ಲೋಬಿನ್ ಪರೀಕ್ಷೆ ಮಾಡಲಾಯಿತು. ಆರೋಗ್ಯ ಸಿಬ್ಬಂದಿ ಚೈತ್ರಾ, ರಾಧಾಮಣಿ, ಮುಖ್ಯಶಿಕ್ಷಕ ಶಿವಾನಂದ್, ಶಿಕ್ಷಕರಾದ ಎಸ್.ಮಹೇಶ್, ಗಾಲಿಬ್ ಸಾಬ್ ಬಾಗಲಕೋಟೆ, ಚಂದನಾ, ಮೈನಾ, ಸುಮಿತ್ರಾ ಇದ್ದರು.