

ಬಾಗಲಕೋಟ: ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗಲು ಅನಧಿಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ ಮಾಹಿತಿ ಪಡೆದುಕೊಂಡು ಶೀಘ್ರದಲ್ಲಿಯೇ ಸೂಕ್ತ ಪರಿಶೀಲನೆ ನಡೆಸಲಾಗುವುದೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಸೋಮವಾರ ಜರುಗಿದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಲಯ ನಿಯಮಾವಳಿ, ಸುಪ್ರೀಂ ಕೋರ್ಟ ಆದೇಶ, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ನಿಯಮಾವಳಿ ಹಾಗೂ ಠರಾವು ಪ್ರತಿಗಳು ಇದ್ದರೆ ಮಾತ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ. ಪ್ರಸ್ತುತ ಅವರಲ್ಲಿರುವ ಮಾಹಿತಿ ಏನು ಇದೆ. ಬೈಲಾದಲ್ಲಿರುವ ನಿಯಮಾವಳಿಗಳನ್ನು ಇದಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಸಂಬಂಧಪಟ್ಟ ವಲಯ ಯೋಜನೆಯ ಅಧಿಕಾರಿಗಳು ಇಲ್ಲ. ಮಾಹಿತಿ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.
ಈ ಬಗ್ಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಯಾವುದೇ ರೀತಿಯಲ್ಲಿ ಶಾಂತಿ ಕದಡುವ ಕೆಲಸ ಆಗಬಾರದು. ಪ್ರಸ್ತುತ ನಿಯಮಾವಳಿಯ ಪ್ರಕಾರ ಕಾನೂನು ಬದ್ದವಾಗಿದ್ದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಬಿಟಿಡಿಎ, ನಗರಸಭೆ, ವಲಯ ಯೋಜನಾ ಅಧಿಕಾರಿಗಳ ಸಭೆ ಕರೆದು ಸೂಕ್ತ ಮಾಹಿತಿ ಪಡೆದುಕೊಳ್ಳಲಾಗುವುದು. ಇದನ್ನು ಒಂದೇ ದಿನದಲ್ಲಿ ನಿಧಾರಕ್ಕೆ ಬರಲು ಸಾಧ್ಯವಿಲ್ಲ. ಮಾಹಿತಿ ಪಡೆದುಕೊಂಡು ಕಾನೂನಿನ ಪ್ರಕಾರ ಸೂಕ್ತ ನಿರ್ದಾರ ಕೈಗೊಳ್ಳಲಾಗುವುದೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಅನಧಿಕೃತ ಕಟ್ಟಡದ ಬಗ್ಗೆ ಬಿಟಿಡಿಎ ಮತ್ತು ನಗರಸಭೆಯಿಂದ ಮಾಹಿತಿ ಪಡೆಯಲಾಗುತ್ತದೆ. ಮಾಹಿತಿ ನೀಡಲು ಎಷ್ಟು ಸಮಯ ಬೇಕಾಗುವುದೆಂಬುದನ್ನು ಅಧಿಕಾರಿಗಳಿಂದ ತಿಳಿದು ನಾಗರಿಕರನ್ನು ಮತ್ತೊಮ್ಮೆ ಸಭೆ ಕರೆದು ಸೂಕ್ತ ನಿರ್ಧಾರಕ್ಕೆ ಬರಲಾಗುತ್ತದೆ. ಜನರ ಭಾವನೆಗಳಿಗೆ ಧಕ್ಕೆ ಬರದ ರೀತಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಎ.ದಂಡಿಯಾ ನಾಗರಿಕರು ಹಳೆ ಬಾಗಲಕೋಟೆ ಮುಳುಗಡೆಯಾದ ನಂತರ ಪುನರ್ವಸತಿ ಕಲ್ಪಿಸಲು ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಹುಟ್ಟಿದೆ. ಹಳೆಯ ಬಾಗಲಕೋಟೆಯಲ್ಲಿ ಇದ್ದಲ ಧಾರ್ಮಿಕ ಕಟ್ಟಡಗಳು ಎಷ್ಟು ಇದ್ದವು ನವನಗರದಲ್ಲಿ ಎಷ್ಟು ನಿರ್ಮಾಣವಾಗಿವೆ ಎಂಬುದನ್ನು ಅಧಿಕಾರಿಗಳು ಮಾಹಿತಿ ನೀಡಬೇಕಿದೆ. ಅನಧಿಕೃತ ಇದ್ದದ್ದು ಅಧಿಕೃತವಾಗಬೇಕು ಎಂದು ಹೇಳಿದರೆ, ವಕೀಲರಾದ ಚಂದ್ರಶೇಖರ ಮಾತನಾಡಿ ಹಳೆಯ ಬಾಗಲಕೋಟೆಯಲ್ಲಿ ಎಷ್ಟು ಧಾರ್ಮಿಕ ಸ್ಥಳಗಳು ಮುಳುಗಡೆಯಾಗಿವೆ. ಎಷ್ಟಕ್ಕೆ ಕೊಟ್ಟಿದ್ದು, ಯಾವುದಕ್ಕೆ ಕೊಟ್ಟಿಲ್ಲ, ಅನಧಿಕೃತ ಕಟ್ಟಡಗಳು ಎಷ್ಟು ಇವೆ. ಇದಕ್ಕೆ ಬಿಡಿಟಿಎ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಬೇಕೆಂದು ಸಭೆಯಲ್ಲಿ ಕೇಳಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ, ಡಿ.ವಾಯ್.ಎಸ್.ಪಿ ಗಜಾನನ ಸುತಾರ ಸೇರಿದಂತೆ ಸಮುದಾಯದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.