ಅನಗತ್ಯವಾಗಿ ತಿರುಗಾಡಿದರೆ ಹುಷಾರ್

14HNL1
Published on

ಹಾನಗಲ್ಲ: ತಾಲೂಕಿನಾದ್ಯಾಂತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜು.15 ರಿಂದ ಮಧ್ಯಾಹ್ನ 3 ಗಂಟೆಯಿಂದ ಲಾಕ್​ಡೌನ್ ಮಾಡಲು ತಾಲೂಕು ಆಡಳಿತ ನಿರ್ಧರಿಸಿದೆ.

ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವರ್ತಕರ ಹಾಗೂ ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಸರ್ಕಾರದ ನಿರ್ದೇಶನವಿಲ್ಲವಾದರೂ ತಾಲೂಕಿನ ಜನತೆಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ತಾಲೂಕು ಆಡಳಿತ ಈ ತೀರ್ಮಾನ ಕೈಗೊಂಡಿದೆ. ಎಲ್ಲರೂ ಮಧ್ಯಾಹ್ನ 3 ಗಂಟೆಗೆ ಕಡ್ಡಾಯವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಬೇಕು. ಇದಕ್ಕೆ ವರ್ತಕರ ಜತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ ಎಂದರು.

ತಹಸೀಲ್ದಾರ್ ಪಿ.ಎಸ್. ಎರ್ರೀಸ್ವಾಮಿ ಮಾತನಾಡಿ, ಬೆಂಗಳೂರ ಲಾಕ್​ಡೌನ್ ಆಗಿರುವುದರಿಂದ ಅಲ್ಲಿನ ಕಾರ್ವಿುಕರು ಗ್ರಾಮಗಳಿಗೆ ಬರುವ ಸಾಧ್ಯತೆಯಿದೆ. ಸೋಂಕು ನಗರಗಳಿಂದ ಗ್ರಾಮ-ಗ್ರಾಮಗಳಲ್ಲೂ ವ್ಯಾಪಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಲಾಕ್​ಡೌನ್ ಅನಿವಾರ್ಯವಾಗಿದೆ. ಗ್ರಾಮ ಮಟ್ಟದಲ್ಲಿ ಆಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಗ್ರಾಮಗಳಲ್ಲಿ ಡಂಗುರ ಸಾರುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ಸಿಪಿಐ ಶಿವಶಂಕರ ಗಣಾಚಾರಿ ಮಾತನಾಡಿ, ಮಾಸ್ಕ್ ಧರಿಸದಿರುವುದು, ಅನಗತ್ಯವಾಗಿ ಓಡಾಡುವ ಪಾದಚಾರಿಗಳು ಹಾಗೂ ಖಾಸಗಿ ವಾಹನಗಳಿಗೆ ಯಾವುದೇ ಮುಲಾಜಿಲ್ಲದೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಬೇರೆ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದರು.

ಪ್ರಭಾರಿ ತಾಪಂ ಇಒ ಶೇಖರ ಹಂಚಿನಮನಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎನ್.ಭಜ್ಜಕ್ಕನವರ, ಪಿಎಸ್​ಐ ಎಸ್.ಪಿ. ಪಟ್ಟಣಶೆಟ್ಟಿ, ಹಾಗೂ ಹೋಟಲ್, ತರಕಾರಿ, ಹೂವು-ಹಣ್ಣು, ದಿನಸಿ, ಬಟ್ಟೆ, ಬೇಕರಿ, ಮೊಬೈಲ್, ಢಾಬಾ ಅಂಗಡಿಗಳ ಮಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು.

ಲಾಕ್​ಡೌನ್ ಸಮಯ ಬದಲು

ಗುತ್ತಲ: ಪಟ್ಟಣದಲ್ಲಿ ಕರೋನಾ ತಡೆಗಟ್ಟುವ ನಿಟ್ಟಿನಲ್ಲಿ ಜಾರಿ ಮಾಡಿದ್ದ ಲಾಕ್​ಡೌನ್ ಸಮಯವನ್ನು ತಹಸೀಲ್ದಾರ್ ಶಂಕರ ಜಿ.ಎಸ್ ಪರಿಷ್ಕರಣೆ ಮಾಡಿದ್ದಾರೆ. ಪ್ರತಿ ದಿನ ಮಧ್ಯಾಹ್ನ 12ರ ಬದಲಾಗಿ 2ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಜಾರಿ ಮಾಡಿದ್ದಾಗಿ ವಿಜಯವಾಣಿಗೆ ತಿಳಿಸಿದ್ದಾರೆ.

ಅವಶ್ಯವಿದ್ದರೆ ಮಾತ್ರ ಹೊರ ಬನ್ನಿ

ಸವಣೂರ: ಕೋವಿಡ್-19 ಹಿನ್ನೆಲೆಯಲ್ಲಿ ತಾಲೂಕಿನ ಸೀಲ್​ಡೌನ್ ಪ್ರದೇಶಗಳ ಕುಟುಂಬಗಳಿಗೆ ವಿತರಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನೀಡಿದ 300 ಆಹಾರ ದಿನಸಿ ಕಿಟ್​ಗಳನ್ನು ಮಂಗಳವಾರ ಪಟ್ಟಣದಲ್ಲಿ ತಾಲೂಕು ಬಿಜೆಪಿ ಘಟಕದ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರಿಗೆ ಹಸ್ತಾಂತರಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಗಂಗಾಧರ ಬಾಣದ ಮಾತನಾಡಿ, ಸಾಂಕ್ರಾಮಿಕ ರೋಗದ ಬಗ್ಗೆ ಭಯಭೀತರಾಗದೆ ಮುಂಜಾಗ್ರತೆಯಾಗಿ ಮನೆಯಲ್ಲಿಯೇ ಉಳಿದು ಅವಶ್ಯವಿದ್ದರೆ ಮಾತ್ರ ಹೊರ ಬನ್ನಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಕರೊನಾ ವಿರುದ್ಧ ಹೋರಾಡುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದರು.

ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಬಿಜೆಪಿ ತಾಲೂಕು ಘಟಕದ ಪದಾಧಿಕಾರಿಗಳಾದ ಮಲ್ಲಾರೆಪ್ಪ ತಳ್ಳಿಹಳ್ಳಿ, ಸುಭಾಸ ಗಡೆಪ್ಪನವರ, ಬಸನಗೌಡ ಕೊಪ್ಪದ, ಚನ್ನಬಸಯ್ಯ ದುರ್ಗದಮಠ, ಹನುಮಂತಗೌಡ ಮುದಿಗೌಡ್ರ, ಶಂಕರ ಪಾಟೀಲ, ಪುರಸಭೆ ಸದಸ್ಯ ಮಹೇಶ ಮುದಗಲ್, ಮಾಜಿ ಸದಸ್ಯರಾದ ಸಂಗಮೇಶ ಯರೇಸಿಮಿ, ಮಂಜುನಾಥ ಗಾಣಿಗೇರ, ಕುಮಾರ ದೊಡ್ಡಮನಿ, ಬಸಪ್ಪ ಕಬ್ಬೂರ, ರಾಮಣ್ಣ ಸಂಕ್ಲಿಪೂರ, ಶ್ರೀಕಾಂತ ಲಕ್ಷ್ಮೇಶ್ವರ ಹಾಗೂ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net