ಅಧ್ಯಕ್ಷರಾಗಿ ಟಿ.ಬೆಟ್ಟಹಳ್ಳಿ ಎಂ.ನಾಗರಾಜು ಅವಿರೋಧ ಆಯ್ಕೆ

14 jan tnp 02
Published on

ತಿ.ನರಸೀಪುರ: ತಾಲೂಕಿನ ತಲಕಾಡು ಶ್ರೀ ವೈದ್ಯನಾಥೇಶ್ವರ ಸ್ವಾಮಿ ಹಾಗೂ ಸಮೂಹ ದೇವಾಲಯದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಟಿ.ಬೆಟ್ಟಹಳ್ಳಿ ಎಂ.ನಾಗರಾಜು ಅವಿರೋಧ ಆಯ್ಕೆಯಾದರು.

ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಬೆಟ್ಟದ ತಪ್ಪಲಿನಲ್ಲಿರುವ ಅತಿಥಿ ಗೃಹದಲ್ಲಿ ಸೋಮವಾರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ಸಂಬಂಧ ವಿಶೇಷ ಚುನಾವಣೆ ಸಭೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನದ ಆಯ್ಕೆ ಬಯಸಿ ಎಂ.ನಾಗರಾಜು ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ ಪ್ರಕಟಿಸಿದರು. ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ನಿರ್ಣಯದಂತೆ ಶ್ರೀ ವೈದ್ಯೇಶ್ವರ ಸ್ವಾಮಿ ಹಾಗೂ ಸಮೂಹ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನಾಗಿ 9 ಮಂದಿಯನ್ನು ಜ.9ರಂದು ಆಯ್ಕೆ ಮಾಡಲಾಗಿತ್ತು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎನ್.ಕೋಕಿಲಾ, ಕೆ.ನಾಗಮ್ಮ, ಟಿ.ಎಂ.ವಿಜಯಕುಮಾರ್, ಆರ್.ಮಾದೇಶ್, ಸಿ.ಶಾಂತಕುಮಾರ್, ಟಿ.ಎನ್.ಲೋಕೇಶ್, ಟಿ.ಎಸ್.ಗೋವಿಂದರಾಜು, ಅರ್ಚಕರು, ಪ್ರಧಾನ ಅರ್ಚಕ ಚುನಾವಣೆಗೆ ಸಮ್ಮತಿ ಸೂಚಿಸಿದ್ದರು.

ನೂತನ ಅಧ್ಯಕ್ಷ ಟಿ.ಬೆಟ್ಟಹಳ್ಳಿ ಎಂ.ನಾಗರಾಜು ಮಾತನಾಡಿ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಉದ್ಘಾಟನೆ ಹಾಗೂ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಗಮನ ನೀಡಲಾಗುವುದು ಎಂದು ತಿಳಿಸಿದರು.

ಪ್ರಧಾನ ಅರ್ಚಕ ಆನಂದ್ ದೀಕ್ಷಿತ್, ಅರ್ಚಕರಾದ ವಿಶ್ವನಾಥ್, ಡಿ.ರಮೇಶ್, ಕುಮಾರಸ್ವಾಮಿ, ಮಹೇಶ್ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net