ಅಧ್ಯಕ್ಷರಾಗಿ ಘೊಟ್ನೇಕರ್ ಮುಂದುವರಿಕೆ

S.L. Ghotnekar '
Published on

ಶಿರಸಿ: ಇಲ್ಲಿನ ಕೆನರಾ ಡಿಸ್ಟ್ರಿಕ್ಟ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕಿಗೆ ಆಡಳಿತಾಧಿಕಾರಿ ನೇಮಕ ಮಾಡಿದ ಪ್ರಕ್ರಿಯೆಗೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಈ ಹಿನ್ನಲೆಯಲ್ಲಿ ಮತ್ತೆ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ್ ಬುಧವಾರ ಅಧಿಕಾರ ವಹಿಸಿಕೊಂಡರು.

ಕೆನರಾ ಡಿಸಿಸಿ ಬ್ಯಾಂಕಿಗೆ 2020-21ನೇ ಸಾಲಿನಿಂದ ಮುಂದಿನ 5 ವರ್ಷಗಳ ಅವಧಿಗೆ ಬ್ಯಾಂಕಿನ ಆಡಳಿತ ಮಂಡಳಿಗೆ ಚುನಾವಣೆ ನಡೆಯಬೇಕಾಗಿತ್ತು. ಆದರೆ, ಕೋವಿಡ್-19 ಮಹಾಮಾರಿಯಿಂದ ಚುನಾವಣೆಗಳನ್ನು 2020 ಡಿಸೆಂಬರ್ 31ರವರೆಗೆ ಸರ್ಕಾರವು ಮುಂದೂಡಿ ಆದೇಶ ಮಾಡಿತ್ತು. ಅಲ್ಲದೆ, ಚುನಾವಣೆ ನಡೆಸುವವರೆಗೆ ಸರ್ಕಾರದ ಆದೇಶದನ್ವಯ ಬ್ಯಾಂಕಿಗೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕಾಗಿದ್ದರಿಂದ ಶಿರಸಿ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರನ್ನ ನೇಮಿಸಲಾಗಿತ್ತು. ಈ ಬಗ್ಗೆ ಚುನಾವಣೆ ಮುಗಿಯುವವರೆಗೆ ಹಿಂದಿನ ಆಡಳಿತ ಮಂಡಳಿಯನ್ನೇ ಮುಂದುವರಿಸುವಂತೆ ಹಾಗೂ ಆಡಳಿತಾಧಿಕಾರಿಗಳ ನೇಮಕಾತಿಯನ್ನು ಹಿಂತೆಗೆದುಕೊಳ್ಳುವ ಕುರಿತು ಹೈಕೋರ್ಟಿನಲ್ಲಿ ಮನವಿ ಸಲ್ಲಿಸಲಾಗಿತ್ತು. ಬ್ಯಾಂಕಿನ ಮನವಿಯನ್ನು ಪರಿಶೀಲಿಸಿ ಹೈಕೋರ್ಟ್, ಆಡಳಿತಾಧಿಕಾರಿ ನೇಮಕಾತಿ ಪ್ರಕ್ರಿಯೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ ಹಿನ್ನಲೆಯಲ್ಲಿ ಬ್ಯಾಂಕಿನ ಹಿಂದಿನ ಆಡಳಿತ ಮಂಡಳಿಯವರಿಗೆ ಪುನಃ ಅಧಿಕಾರ ವಹಿಸಿಕೊಂಡು ಮುಂದಿನ ಚುನಾವಣೆಯವರೆಗೆ ಕೆಲಸ ನಿರ್ವಹಿಸಲು ಅನುಕೂಲ ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಬುಧವಾರ ಮತ್ತೊಮ್ಮೆ ಅಧ್ಯಕ್ಷರಾಗಿ ಎಸ್.ಎಲ್. ಘೊಟ್ನೇಕರ್ ಅಧಿಕಾರವನ್ನು ವಹಿಸಿಕೊಂಡರು. ಅಲ್ಲದೆ, ಇಷ್ಟು ದಿನ ಆಡಳಿತಾಧಿಕಾರಿ ಆಗಿದ್ದ ಉಪವಿಭಾಗಾಧಿಕಾರಿ ಅವರಿಗೆ ಬ್ಯಾಂಕಿನ ವತಿಯಿಂದ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net